ಕಾಸರಗೋಡು: ಮಹತ್ವಾ ಕಾಂಕ್ಷೆಯ ವಿದ್ಯುತ್ ರೈಲು ಗಾಡಿಯನ್ನು ಚೆರ್ವತ್ತೂರಿನಿಂದ ಮಂಗಳೂರಿಗೆ ಓಡಿಸಲು ಸುರಕ್ಷಾ ಕಮಿಷನರ್ ಅನುಮತಿ ನೀಡಿದ್ದಾರೆ.
ದಕ್ಷಿಣ ವಲಯ ಸರ್ಕಲ್ ಸುರಕ್ಷಾ ಕಮಿಷನರ್ ಕೆ.ಎ. ಮನೋಹರನ್ ವಿದ್ಯುತ್ ರೈಲು ಗಾಡಿ ಓಡಿಸಲು ಅನುಮತಿ ನೀಡಿದ್ದು ವಿದ್ಯುತ್ ಸಂಪರ್ಕ ಅಳವಡಿಸಿದ ಈ ಹಳಿಯಲ್ಲಿ ಪ್ರಯಾಣಿಕರ ಹಾಗೂ ಸರಕು ರೈಲು ಗಾಡಿಗಳನ್ನು ಓಡಿಸಬಹುದು. ಪ್ರಸ್ತುತ ಚೆರ್ವತ್ತೂರು ರೈಲ್ವೇ ಸಬ್ ಸ್ಟೇಶನ್‌ನಿಂದ ವಿದ್ಯುತ್ ಪಡೆದು ರೈಲು ಗಾಡಿಯನ್ನು ಓಡಿಸಬಹುದಾಗಿದೆ.
ಚೆರ್ವತ್ತೂರಿನಿಂದ ವಿದ್ಯುತ್ ಪಡೆಯಲು ಒಂದು ಮಿತಿಯಿದೆ. ಈ ಕಾರಣದಿಂದ ಉಪ್ಪಳ ಸಬ್‌ಸ್ಟೇಶನ್ ಶೀಘ್ರವೇ ಪೂರ್ತಿಗೊಳಿಸಬೇಕೆಂದು ಸುರಕ್ಷಾ ಕಮಿಷನರ್ ಅನುಮತಿ ಪತ್ರದೊಂದಿಗೆ ಸೂಚಿಸಿದ್ದಾರೆ. ವಿದ್ಯುತ್ ಬಳಸಿ ರೈಲು ಓಡಿಸಲು ಅನುಮತಿ ನೀಡಿ ರುವುದರಿಂದಾಗಿ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಮಂಗಳೂರು ವರೆಗೆ ಎಂಜಿನ್ ಬದಲಾಯಿಸದೆ ರೈಲು ಗಾಡಿಯನ್ನು ಓಡಿಸಬಹುದಾಗಿದೆ.
ಶೋರ್ನೂರಿನಿಂದ ಮಂಗಳೂರು ವರೆಗಿನ 315 ಕಿ.ಮೀಟರ್ ನೀಳದ ರೈಲು ಹಳಿಯಲ್ಲಿ ಚೆರ್ವತ್ತೂರು -ಮಂಗಳೂರು ಅಂತಿಮ ಹಂತದಲ್ಲಿ ವಿದ್ಯುದೀಕರಿಸಲಾಗಿತ್ತು. 2015ರ ಮಾರ್ಚ್‌ನಲ್ಲಿ 84 ಕಿ.ಮೀ. ನೀಳದ ಶೋರ್ನೂರು – ಕಲ್ಲಾಯಿ ವಿದ್ಯುತ್ ಹಳಿಯಲ್ಲಿ ವಿದ್ಯುತ್ ರೈಲ್ವೇ ಕಮಿಷನ್ ಅನುಮತಿ ನೀಡಿತ್ತು. ಕಲ್ಲಾಯಿಯಿಂದ ಚೆರ್ವತ್ತೂರು ವರೆಗಿನ 140 ಕಿ. ಮೀ. ನೀಳದ ವಿದ್ಯುತ್ ರೈಲು ಹಳಿ ಯಲ್ಲಿ ರೈಲು ಗಾಡಿ ಓಡಿಸಲು 2016ರ ಮಾರ್ಚ್ ನಲ್ಲಿ ಕಮಿಷನ್ ಮಾಡಲಾ ಗಿತ್ತು. ಈ ಹಳಿಯಲ್ಲಿ ರೈಲು ಓಡಿಸಲು ಅನುಮತಿ ನೀಡಿದ್ದರೂ ಕಣ್ಣೂರು ತನಕ ಮಾತ್ರವೇ ವಿದ್ಯುತ್ ರೈಲು ಓಡಿಸ ಲಾಗಿತ್ತು. ಪಯ್ಯನ್ನೂರಿನ ವರೆಗೆ ಸರಕು ರೈಲು ಗಾಡಿಯನ್ನು ಓಡಿಸಲಾಗಿತ್ತು.
ಕೆಲವು ದಿನಗಳ ಹಿಂದೆ ಶೊರ್ನೂರು – ಮಂಗಳೂರು ವಿದ್ಯುತ್ ಹಳಿಯಲ್ಲಿ ಪರೀಕ್ಷಾರ್ಥ ರೈಲು ಗಾಡಿಯನ್ನು ಓಡಿಸಲಾಗಿತ್ತು. ಟ್ರಯಲ್ ರೈಲು ಓಡಾಟ ಯಶಸ್ವಿಯಾಗಿತ್ತು.