Advertisement

ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಪ್ರಮಾಣ ಪತ್ರಗಳು ಕಳವು

06:31 AM Feb 13, 2019 | Team Udayavani |

ಬೆಂಗಳೂರು: ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನ ಟಪಾಲು ವಿಭಾಗದಲ್ಲಿದ್ದ ವಿದ್ಯಾರ್ಥಿನಿಯರ ಡಿಪ್ಲೊಮಾ ಪ್ರಮಾಣ ಪತ್ರಗಳು ಕಣ್ಮರೆಯಾಗಿದ್ದು, 43 ಮಂದಿ ವಿದ್ಯಾರ್ಥಿನಿಯರ ಭವಿಷ್ಯ ಅತಂತ್ರವನ್ನಾಗಿಸಿದೆ.

Advertisement

ಘಟನೆ ನಡೆದು ಒಂದು ವರ್ಷ ಮೂರು ತಿಂಗಳ ಬಳಿಕ ಕಾಲೇಜಿನ ಪ್ರಾಂಶುಪಾಲರಾದ ಸಲ್ಮಾ ಸೈಯೀನ್‌ ಅವರು ದೂರು ನೀಡಿದ್ದು, ಈ ಸಂಬಂಧ ಕಳವು ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಾಲೇಜಿನ ಪ್ರಾಂಶುಪಾಲರು, ಪ್ರಮಾಣ ಪತ್ರ ಒದಗಿಸುವ ಭರವಸೆ ನೀಡಿದ್ದಾರೆ.

2016 -17ನೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣಗೊಂಡ 43 ವಿದ್ಯಾರ್ಥಿನಿಯರ ಅಂಕ ಪಟ್ಟಿ ತಾಂತ್ರಿಕ ಶಿಕ್ಷಣ ಪರೀûಾ ಮಂಡಳಿಯಿಂದ 2017ರಲ್ಲಿ ಕಾಲೇಜಿಗೆ ಬಂದಿತ್ತು. ಅದೇ ವರ್ಷ ಡಿಸೆಂಬರ್‌ನಲ್ಲಿ ವಿದ್ಯಾರ್ಥಿನಿಯರ ವಿದ್ಯಾರ್ಹತೆ ಪ್ರಮಾಣ ಪತ್ರಗಳು ಬಂದಿತ್ತು. ವಿದ್ಯಾರ್ಥಿನಿಯರಿಗೆ ಅಂಕಪಟ್ಟಿ ಜತೆ ಪ್ರಮಾಣ ಪತ್ರವನ್ನು ವಿತರಿಸುವ ಉದ್ದೇಶದಿಂದ ಟಪಾಲಿನಲ್ಲಿ ಇಡಲಾಗಿತ್ತು.

ಆದರೆ, ವಿತರಣೆ ಸಂದರ್ಭದಲ್ಲಿ ಟಪಾಲಿನಲ್ಲಿದ್ದ ಪ್ರಮಾಣ ಪತ್ರ ಕಳ್ಳತನವಾಗಿರುವುದು ಕಾಲೇಜಿನ ಆಡಳಿತ ಮಂಡಳಿ ಗಮನಕ್ಕೆ ಬಂದಿತ್ತು. ಪ್ರಮಾಣ ಪತ್ರಗಳನ್ನು ಕಳವು ಮಾಡಿರುವ ಕಳ್ಳರು ಅಂಕಪಟ್ಟಿಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.

ಗೊತ್ತಾಗಿದ್ದು ಹೇಗೆ?: ಉದ್ಯೋಗಕ್ಕೆ ಅವಶ್ಯವಿದ್ದ ತಮ್ಮ ಡಿಪ್ಲೊಮಾ ಪ್ರಮಾಣ ಪತ್ರಕ್ಕಾಗಿ ವಿದ್ಯಾರ್ಥಿನಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಾಲೇಜಿನ ಸಿಬ್ಬಂದಿ ಟಪಾಲು ವಿಭಾಗದಲ್ಲಿ ಪ್ರಮಾಣ ಪತ್ರಕ್ಕಾಗಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಬಳಿಕ ಪ್ರಾಂಶುಪಾಲರ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಂಶುಪಾಲರು, ಕೂಡಲೇ ಶಿಕ್ಷಕರು, ಟಪಾಲು ವಿಭಾಗದ ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಿ, ಎಲ್ಲೆಡೆ ಹುಡುಕಾಟಕ್ಕೆ ಸೂಚಿಸಿದ್ದರು. ಆದರೂ ಪತ್ತೆಯಾಗಿಲ್ಲ.

Advertisement

ನಂತರ ಪ್ರಾಂಶುಪಾಲರು ಇಲಾಖೆಯ ಕಾರ್ಯದರ್ಶಿ ಮತ್ತು ನಿರ್ದೇಶಕರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕಾಲೇಜಿನ ವ್ಯಾಪ್ತಿಯಲ್ಲೇ ನಾಪತ್ತೆಯಾಗಿರುವ ಸಾಧ್ಯತೆಯಿದ್ದು, ಮೂರು ತಿಂಗಳಲ್ಲಿ ಹುಡುಕಿ ವರದಿ ನೀಡುವಂತೆ ನಿರ್ದೇಶಕರು ಕಾಲೇಜಿನ ಆಡಳಿತ ಮಂಡಳಿಗೆ ಸೂಚಿಸಿದ್ದರು. ಆದರೂ ಪ್ರಮಾಣ ಪತ್ರ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ 2018ರ ಏಪ್ರಿಲ್‌ನಲ್ಲಿ ಕಾಲೇಜಿನ ಪ್ರಾಂಶುಪಾಲರು ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ತನಿಖಾ ಸಮಿತಿಗೂ ಸಿಗಲಿಲ್ಲ: ಏಕಾಏಕಿ ಪ್ರಮಾಣ ಪತ್ರಗಳು ನಾಪತ್ತೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ತಾಂತ್ರಿಕ ಶಿಕ್ಷಣ ಇಲಾಖೆ ಪ್ರತ್ಯೇಕ ತನಿಖಾ ಸಮಿತಿ ರಚಿಸಿ ವಿಚಾರಣೆ ನಡೆಸಿತ್ತು. ಕಾಲೇಜಿನ ಟಪಾಲು ವಿಭಾಗ, ಪ್ರತಿ ಕೊಠಡಿಗಳಲ್ಲೂ ಸಮಿತಿ ಸದಸ್ಯರು ಹುಡುಕಾಟ ನಡೆಸಿದ್ದರು. ಆದರೆ, ಎಲ್ಲಿಯೂ ಪ್ರಮಾಣ ಪತ್ರಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಫೆ.11ರಂದು ಪ್ರಾಂಶುಪಾಲರಾದ ಸಲ್ಮಾ ಸೈಯೀನ್‌,

ವಿಧಾನಸೌಧ ಠಾಣೆಯಲ್ಲಿ 2018ರ ಮಾ.13ರಂದು ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯಿಂದ 43 ಮೂಲ ಡಿಪ್ಲೊಮಾ ಪ್ರಮಾಣ ಪತ್ರಗಳು ಸಂಸ್ಥೆಯಲ್ಲಿ ಸ್ವಿಕೃತಿಗೊಂಡಿದ್ದು, ನಂತರ ಸಂಸ್ಥೆಯಲ್ಲಿ ಅವುಗಳು ಕಳವು ಆಗುರುತ್ತದೆ. ಯಾರು ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಳವು ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ಕೋರಿ ಪ್ರಕರಣ ದಾಖಲಿಸಿದ್ದಾರೆ.

ಪರ್ಯಾಯ ವ್ಯವಸ್ಥೆ: 2017 ಡಿಸೆಂಬರ್‌ನಲ್ಲಿ ಪ್ರಮಾಣ ಪತ್ರಗಳು ನಾಪತ್ತೆಯಾಗಿದ್ದು, ಈ ವಿಚಾರವನ್ನು ಇಲಾಖೆಯ ಕಾರ್ಯದರ್ಶಿ ಹಾಗೂ ನಿರ್ದೇಶಕರ ಗಮನಕ್ಕೆ ತರಲಾಗಿತ್ತು. ನಂತರ 2018ರ ಏಪ್ರಿಲ್‌ನಲ್ಲಿ ನಾಪತ್ತೆ ದೂರು ನೀಡಲಾಗಿದ್ದು, ಆದರೆ, ಪ್ರಕರಣ ದಾಖಲಿಸಿರಲಿಲ್ಲ.

ಇದೀಗ ಕಳ್ಳತನ ಪ್ರಕರಣ ದಾಖಲಿಸಲಾಗಿದೆ. ಒಂದು ವೇಳೆ ಉದ್ಯೋಗ ಸಲುವಾಗಿ ಯಾರಾದರೂ ವಿದ್ಯಾರ್ಥಿನಿಯರು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ, ಇಲಾಖೆಯ ಕಾರ್ಯದರ್ಶಿ ಮತ್ತು ನಿರ್ದೇಶಕರ ಸೂಚನೆ ಮೇರೆಗೆ ಕ್ರಮಕೈಗೊಳ್ಳಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಸಲ್ಮಾ ಸೈಯೀನ್‌ ತಿಳಿಸಿದರು.

ಪ್ರಮಾಣ ಪತ್ರ ಕದ್ದವರ್ಯಾರು?: ವಿದ್ಯಾರ್ಥಿನಿಯರ ಭವಿಷ್ಯ ನಿರ್ಧರಿಸುವ ಪ್ರಮಾಣ ಪತ್ರಗಳನ್ನು ಕಳವು ಮಾಡಿದವರು ಯಾರೆಂಬುದು ಇದೀಗ ಯಕ್ಷ ಪ್ರಶ್ನೆಯಾಗಿದೆ. ಕಾಲೇಜಿನ ಸಿಬ್ಬಂದಿ ಅಥವಾ ಕಾಲೇಜಿಗೆ ಬಂದಿದ್ದ ಸಾರ್ವಜನಿಕರು ಕಳವು ಮಾಡಿದ್ದಾರೆಯೇ ಎಂಬುದು ಇದುವರೆಗಿನ ಎಲ್ಲ ರೀತಿಯ ತನಿಖೆಯಲ್ಲಿ ಬೆಳಕಿಗೆ ಬಂದಿಲ್ಲ.

ಒಂದು ವೇಳೆ ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಸೃಷ್ಟಿಸುವ ದಂಧೆಕೋರರು ಕೃತ್ಯ ಎಸಗಿದ್ದರೆ, 43 ಮಂದಿ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ದೊಡ್ಡ ಕೊಡಲಿ ಪೆಟ್ಟು ಬೀಳಲಿದೆ. ಅಲ್ಲದೆ, ಇಲಾಖೆಯ ಸಿಬ್ಬಂದಿ ಮೇಲೂ ಗುಮಾನೆ ಇದೆ ಎಂದು ಎನ್ನಲಾಗಿದೆ.

ಸಿಸಿ ಕ್ಯಾಮೆರಾ ಅಳವಡಿಕೆ: ಪ್ರಮಾಣ ಪತ್ರಗಳ ಕಳವು ಪ್ರಕರಣ ಬಳಿಕ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ, ಕಾಲೇಜಿನ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ. ಅಲ್ಲದೆ, ಟಪಾಲು ಹಾಗೂ ಕೆಲ ಕೊಠಡಿಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿದೆ. 

ಪ್ರಮಾಣ ಪತ್ರಗಳ ಕಳವು ಸಂಬಂಧ ಕಾಲೇಜಿ ಆಡಳಿತ ಮಂಡಳಿ ಪೊಲೀಸ್‌ ಠಾಣೆಗೆ ದೂರು ನೀಡಿದೆ. ಹೀಗಾಗಿ ಕಳ್ಳತನವಾಗಿರುವ 43 ಪ್ರಮಾಣ ಪತ್ರಗಳನ್ನು ರದ್ದು ಪಡಿಸಿ, ಮರು ಮುದ್ರಣಕ್ಕೆ ಪ್ರಸ್ತಾವನೆಗೆ ಕ್ರಮಕೈಗೊಳ್ಳಲಾಗುವುದು.
-ಬಿ.ಆರ್‌. ರಾಗಿಣಿ, ಜಂಟಿ ನಿರ್ದೇಶಕರು, ತಾಂತ್ರಿಕ ಶಿಕ್ಷಣ ಪರೀûಾಂಗ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next