Advertisement

ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣಪತ್ರ

05:33 PM May 10, 2019 | Suhan S |

ಧಾರವಾಡ: ಇಲ್ಲಿಯ ಕೃಷಿ ವಿವಿ ಆವರಣದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ, ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ತರಬೇತಿ ಮುಗಿದ ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ ಗುರುವಾರ ಜರುಗಿತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಡಾ| ವಿ.ಎಸ್‌. ಉಷಾರಾಣಿ ಮಾತನಾಡಿ, ದೇಶದಲ್ಲಿ ಇದುವರೆಗೂ 35,000 ಕೃಷಿ ಪರಿಕರ ಮಾರಾಟಗಾರರು ಡಿಪ್ಲೊಮಾ ಪ್ರಮಾಣಪತ್ರ ಪಡೆದಿದ್ದು, ಅದರಲ್ಲಿ ಕರ್ನಾಟಕ ರಾಜ್ಯದಿಂದ 6,500 ಜನ ಡಿಪ್ಲೊಮಾ ತರಬೇತಿ ಮುಗಿಸಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ. ಕೃಷಿ ಪರಿಕರ ಮಾರಾಟಗಾರರು ತರಬೇತಿಯಲ್ಲಿ ಪಡೆದ ಜ್ಞಾನ-ಅನುಭವದ ಆಧಾರದ ಮೇಲೆ ಸ್ಥಾನಿಕವಾಗಿ ರೈತರಿಗೆ ಉತ್ಪಾದನಾ ವೆಚ್ಚ ಕಡಿಮೆ ಮಾಡುವ ಹಾಗೂ ಉತ್ಪಾದಕತೆ ಹೆಚ್ಚಿಸುವ ದಿಸೆಯಲ್ಲಿ ಮಾರ್ಗದರ್ಶನ ಮಾಡಬೇಕು. ಹೊಸ ಸಮಸ್ಯೆಗಳಿಗೆ ಪರಿಹಾರ ಬೇಕಾದಲ್ಲಿ ತರಬೇತಿ ನೀಡಿದ ವಿಜ್ಞಾನಿಗಳೊಡನೆ ಸಲಹೆ ಪಡೆದು ರೈತರಿಗೆ ತಿಳಿಸಬೇಕು ಎಂದರು.

ಇಂಪಾಲ್ದ ಕೇಂದ್ರೀಯ ವಿವಿ ಕುಲಪತಿ ಡಾ| ಎಸ್‌. ಅಯ್ಯಪ್ಪನ್‌ ಮಾತನಾಡಿ, ಕೃಷಿ ಅಭಿವೃದ್ಧಿ ಕ್ರಿಯೆಯ ಸರಪಳಿಯಲ್ಲಿ ಕೃಷಿ ಪರಿಕರ ಮಾರಾಟಗಾರರು ಮುಖ್ಯ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಕೃಷಿ ಪರಿಕರಗಳ ಉಪಯೋಗಕ್ಕೆ ನಿಖರವಾದ ಸಲಹೆ-ಸೂಚನೆ ನೀಡಬೇಕು. ಪದವಿ ಪಡೆದ ಕೃಷಿ ಪರಿಕರ ಮಾರಾಟಗಾರರಿಗೆ ಹವಾಮಾನ ಬದಲಾವಣೆ, ಒಣ ಬೇಸಾಯ ಮುಂತಾದ ಆದ್ಯತಾ ವಿಷಯಗಳಲ್ಲಿ ವಿಶೇಷ ತರಬೇತಿಗಳನ್ನು ವಿಶ್ವವಿದ್ಯಾಲಯಗಳು ಹಾಗೂ ಇತರ ಸಂಸ್ಥೆಗಳು ಏರ್ಪಡಿಸುವ ಅವಶ್ಯಕತೆ ಎಂದು ಹೇಳಿದರು.

ಕೃವಿವಿ ಕುಲಪತಿ ಡಾ|ಎಮ್‌.ಬಿ. ಚೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಂಟು ಜಿಲ್ಲೆಗಳಿಂದ 320 ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಡಾ|ಎಂ.ಎನ್‌. ಶೀಲವಂತರ, ಡಾ|ಎಸ್‌.ಬಿ. ದಂಡಿನ, ಡಾ|ಎಂ.ಜಿ. ಚಂದ್ರಕಾಂತ, ಡಾ| ಎ.ಬಿ. ಪಾಟೀಲ ಇದ್ದರು.

ದೇಸಿ ಪುಸ್ತಕ ಹಾಗೂ ದೇಸಿ ಯಶೋಗಾಥೆ ಕುರಿತ ಸಿಡಿ ಬಿಡುಗಡೆಗೊಳಿಸಲಾಯಿತು. ಡಾ| ಎನ್‌.ಎ. ಎಲೇದಹಳ್ಳಿ ಸ್ವಾಗತಿಸಿದರು. ಡಾ| ಸುರೇಖಾ ಸಂಕನಗೌಡರ ಹಾಗೂ ಡಾ| ಎಸ್‌. ದೇವೇಂದ್ರಪ್ಪ ನಿರೂಪಿಸಿದರು. ಡಾ|ಎಸ್‌.ಪಿ. ಹಲಗಲಿಮಠ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next