Advertisement

17ನೇ ಲೋಕಸಭೆಗೆ ವಿಧ್ಯುಕ್ತ ಚಾಲನೆ

01:23 AM Jun 18, 2019 | mahesh |

ಹೊಸದಿಲ್ಲಿ: ಮಂಡ್ಯದ ಪ್ರತಿಷ್ಠಿತ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಸುಮಲತಾ ಅವರಿಗೆ ಸಂಸದರಿಂದ ಅಭಿನಂದನೆ…. ಅಮೇಠಿಯಲ್ಲಿ ಕಾಂಗ್ರೆಸ್‌ ಭದ್ರಕೋಟೆಯನ್ನು ಬೇಧಿಸಿದ ಸ್ಮತಿ ಇರಾನಿಗೆ ಭರಪೂರ ಚಪ್ಪಾಳೆ… ಕೊಡಗಿನ ಸಾಂಪ್ರದಾಯಿಕ ದಿರಿಸಿನಲ್ಲಿ ಸಂಸತ್ತಿಗೆ ಕಾಲಿಟ್ಟ ಪ್ರತಾಪ್‌ ಸಿಂಹ… ಪ್ರತಿಷ್ಠಿತ ಮಂಡ್ಯ ಚುನಾವಣೆ ಗೆದ್ದ ಸುಮಲತಾರಿಂದ ಪ್ರಮಾಣ ವಚನ…

Advertisement

ಸೋಮವಾರ ಆರಂಭಗೊಂಡ 17ನೇ ಲೋಕಸಭೆಯ ಮೊದಲ ಅಧಿವೇಶನದ ಮೊದಲ ದಿನ ಕಂಡು ಬಂದ ವಿಶೇಷಗಳಿವು. ಸಂಸತ್ತಿನ ಎಲ್ಲಾ ಕಡೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ನೂತನ ಸಂಸದರು, ಹಳೆಯ ಸಂಸದರು, ಮಹಿಳಾ ಸಂಸದೆಯರು ಮುಂತಾದವರೆಲ್ಲರೂ ಸದನದಲ್ಲಿ ವಿಶೇಷವಾಗಿ ಕಾಣಿಸಿಕೊಂಡರು. ಎಲ್ಲರ ಮೊಗದಲ್ಲೂ ಮಂದಹಾಸ ತುಳುಕಾಡುತ್ತಿತ್ತು. ಪಕ್ಷಭೇದ ಮರೆತು ಒಬ್ಬರು ಮತ್ತೂಬ್ಬರನ್ನು ಅಭಿನಂದಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಮೋದಿ ನಾಮ ಪ್ರತಿಧ್ವನಿ: ಸದನ ಆರಂಭವಾದ ಕೂಡಲೇ ಸಂಪ್ರದಾಯದಂತೆ ರಾಷ್ಟ್ರಗೀತೆ ಮೊಳಗಿಸಲಾಯಿತು. ಎಲ್ಲಾ ಸದಸ್ಯರೂ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ನೀಡಿ ಆನಂತರ ಆಸೀನರಾದರು. ಆನಂತರ, ಸ್ಪೀಕರ್‌ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದರು. ಆಗ, ಎನ್‌ಡಿಎ ಸಮೂಹದ ಸಂಸದರು ತಮ್ಮ ಮುಂದಿನ ಮೇಜನ್ನು ಕುಟ್ಟುತ್ತಾ ಸಂತಸ ವ್ಯಕ್ತಪಡಿಸಿದರಲ್ಲದೆ, ಮೋದಿ… ಮೋದಿ… ಎಂದು ಘೋಷಣೆ ಕೂಗಿದರು. ಬೋಲೋ ಭಾರತ್‌ ಮಾತಾ ಕೀ ಎಂಬ ಘೋಷಣೆಯೂ ಮೊಳಗಿತು. ಬಿಳಿ ಬಣ್ಣದ ಕುರ್ತಾದ ಮೇಲೆ ಕಡು ಕಂದು ಬಣ್ಣದ ನೆಹರೂ ಜ್ಯಾಕೆಟ್‌ ಧರಿಸಿದ್ದ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದರು.

ಮೋದಿ ನಂತರ, ಸಂಸತ್ತಿನ ಅಧಿಕಾರಿಗಳಾದ ಕೆ. ಸುರೇಶ್‌, ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌, ಬಿ. ಮೆಹ್ತಾಬ್‌ ಪ್ರಮಾಣ ಸ್ವೀಕರಿಸಿದರು. ಆನಂತರ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಮೋದಿ ಸಂಪುಟದ ಹಲವಾರು ಸಚಿವರು ಪ್ರಮಾಣ ಸ್ವೀಕರಿಸಿದರು.

ರಾಹುಲ್‌ ಪ್ರಮಾಣ ವಿಧಿ: ವಯನಾಡ್‌ನಿಂದ ಆಯ್ಕೆಯಾ ಗಿ ರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸೋಮವಾರ ಮಧ್ಯಾಹ್ನ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬೆಳಗ್ಗೆ ಗೈರಾಗಿದ್ದ ಅವರು, ತಮ್ಮ ಟ್ವೀಟ್‌ನಲ್ಲಿ ತಾವು ಮಧ್ಯಾಹ್ನ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿರುವುದಾಗಿ ತಿಳಿಸಿದ್ದರು.

Advertisement

ಸ್ಮತಿ ಸಾಧನೆಗೆ ಮೆಚ್ಚುಗೆ
ಬಿಜೆಪಿಯ ಸ್ಮತಿ ಇರಾನಿ ಅವರು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಶುರುವಾದ ಸದಸ್ಯರ ಕರತಾಡನ ತುಂಬಾ ಹೊತ್ತಿನ ವರೆಗೆ ಇತ್ತು. ಕಾಂಗ್ರೆಸ್ಸಿನ ಭದ್ರಕೋಟೆಯಾದ ಅಮೇಠಿಯಲ್ಲಿ ಆ ಪಕ್ಷದ ಅಧ್ಯಕ್ಷರನ್ನೇ ಸೋಲಿಸಿದ್ದಕ್ಕಾಗಿ ಸ್ಮತಿ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂತು. ಹಿಂದಿಯಲ್ಲಿ ಪ್ರಮಾಣ ಸ್ವೀಕರಿಸಿದ ಅವರು, ಆನಂತರ ಸ್ಪೀಕರ್‌ ಹಾಗೂ ವಿಪಕ್ಷಗಳ ನಾಯಕರಿಗೆ ವಂದಿಸಿದರು. ಆ ವೇಳೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಸ್ಮತಿಯವರ ವಂದನೆ ಗಳಿಗೆ ಪ್ರತಿಯಾಗಿ ವಂದಿಸಿದರು. ಸ್ಮತಿ ಪ್ರಮಾಣ ವಚನದ ವೇಳೆ ರಾಹುಲ್‌ ಗಾಂಧಿಯವರು ಸದನದಲ್ಲಿ ಇರಲಿಲ್ಲ.

ಪ್ರಮಾಣದ ವೇಳೆ ಪ್ರಜ್ಞಾ ವಿವಾದ
ಪ್ರಮಾಣ ಸ್ವೀಕರಿಸುವ ವೇಳೆ, ಭೋಪಾಲ್‌ನ ಸಂಸದೆ ಪ್ರಜ್ಞಾ ಸಿಂಗ್‌ ಅವರು, ತಮ್ಮ ಹೆಸರಿನ ಜತೆಗೆ, ಅವರ ಗುರುಗಳ ಹೆಸರನ್ನೂ ಸೇರಿಸಿ ಕೊಂಡು ಹೇಳಿದ್ದು ವಿವಾದಕ್ಕೆ ಕಾರಣವಾ ಯಿತು. ಪ್ರಮಾಣ ವಚನ ಶುರುವಿನಲ್ಲೇ ಅವರು “ನಾನು…. ಪ್ರಜ್ಞಾ ಸಿಂಗ್‌ ಠಾಕೂರ್‌ ಪೂರ್ಣ ಚೇತನಾನಂದ ಅವಧೇಶಾನಂದ ಗಿರಿ… ‘ ಎಂದಿದ್ದಕ್ಕೆ ಆಕ್ಷೇಪಿಸಿದ ವಿಪಕ್ಷ ಸದಸ್ಯರು, ಪ್ರಜ್ಞಾ ಅವರು ಚುನಾವಣಾ ಅಫಿಡವಿಟ್‌ನಲ್ಲಿ ಹಾಗೂ ಲೋಕಸಭೆಯ ದಾಖಲೆಗಳಲ್ಲಿ ಇರುವಂ ತೆಯೇ ತಮ್ಮ ಹೆಸರನ್ನು ಉಲ್ಲೇಖೀಸ ಬೇಕೆಂದು ಗದ್ದಲವೆಬ್ಬಿಸಿದರು. ಆನಂತರ, ದಾಖಲೆಗಳಲ್ಲಿರುವಂತೆಯೇ ತಮ್ಮ ಹೆಸರನ್ನು ಬಳಸಿಕೊಂಡು ಪ್ರಜ್ಞಾ ಅವರು ತಮ್ಮ ಪ್ರಮಾಣ ವಚನ ಸ್ವೀಕರಿಸಿದರು.

ವಿವಿಧ ಭಾಷೆಗಳಲ್ಲಿ ಪ್ರತಿಜ್ಞಾವಿಧಿ
ಕೇಂದ್ರ ಸಚಿವರಾದ ಹರ್ಷವರ್ಧನ, ಶ್ರೀಪಾದ ನಾಯಕ್‌, ಅಶ್ವಿ‌ನಿ ಚೌಬೆ, ಪ್ರತಾಪ್‌ ಚಂದ್ರ ಸಾರಂಗಿ ಸಂಸ್ಕೃತದಲ್ಲಿ, ಹರ್‌ಸಿಮ್ರತ್‌ ಕೌರ್‌ ಬಾದಲ್‌ ಪಂಜಾಬಿಯಲ್ಲಿ, ಅರವಿಂದ್‌ ಸಾವಂತ್‌, ರಾವ್‌ಸಾಹೇಬ್‌ ಪಾಟೀಲ್‌ ಡಂಬೆ ಅವರು ಮರಾಠಿ ಯಲ್ಲಿ, ಬಾಬುಲ್‌ ಸುಪ್ರಿಯೋ ಇಂಗ್ಲಿಷ್‌ನಲ್ಲಿ, ಜಿತೇಂದ್ರ ಸಿಂಗ್‌ ಡೋಂಗ್ರೆಯಲ್ಲಿ, ರಾಮೇಶ್ವರ್‌ ತೇಲಿ ಅಸ್ಸಾಮಿ ಯಲ್ಲಿ, ದೇಬಶ್ರೀ ಚೌಧರಿ ಬಂಗಾಳಿಯಲ್ಲಿ, ಬಿಜೆಪಿ ಸಂಸದ ಮೆಹ್ತಾಬ್‌ ಒರಿಯಾದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಜೈ ಶ್ರೀರಾಮ್‌ಪಶ್ಚಿಮ ಬಂಗಾಳದವರಾದ, ಕೇಂದ್ರ ಸಚಿವ ಬಾಬುಲಾಲ್‌ ಸುಪ್ರಿಯೋ, ದೇಬಶ್ರೀ ಚೌಧರಿ ಸದನದಲ್ಲಿ ಇತರ ಬಿಜೆಪಿ ಸಂಸದರನ್ನು ಮಾತನಾಡಿಸುವ ಮುನ್ನ ಜೈ ಶ್ರೀರಾಮ್‌ ಎಂದು ಸಂಬೋಧಿ ಸಿದರು. ಜತೆಗೆ, ಗಟ್ಟಿಯಾಗಿ ಸದನದಲ್ಲಿ ಜೈ ಶ್ರೀ ರಾಮ್‌ ಎಂದು ಘೋಷಣೆಗಳನ್ನೂ ಕೂಗಿ ಅವರನ್ನು ಸ್ವಾಗತಿಸಲಾಯಿತು.

ಕಾರ್ಯದರ್ಶಿ ಯಡವಟ್ಟು
ಪ್ರಮಾಣ ವಚನ ಸ್ವೀಕರಿಸುವವರ ಹೆಸರುಗಳನ್ನು ಹೇಳುತ್ತಿದ್ದ ಲೋಕಸಭಾ ಕಾರ್ಯದರ್ಶಿ ಸ್ನೇಹಲತಾ ಶ್ರೀವಾಸ್ತವ ಅವರು, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ಹೆಸರನ್ನು ಪ್ರಕಟಿಸಿದರು. ಆದರೆ, ಅವರು ರಾಜ್ಯಸಭಾ ಸದಸ್ಯರೆಂದು ಮನದಟ್ಟಾದ ನಂತರ ತಮ್ಮ ತಪ್ಪನ್ನು ತಿದ್ದಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next