ಸಿರಿಧಾನ್ಯಗಳು ಪೌಷ್ಟಿಕಾಂಶ ಮತ್ತು ನಾರಿನಂಶ ಸಮೃದ್ಧವಾಗಿದ್ದು, ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ರಾತ್ರಿಯೂಟಕ್ಕೆ ಗೋಧಿ ಅಥವಾ ಅನ್ನದ ಬದಲು ಸಿರಿಧಾನ್ಯಗಳ ಉಪಯೋಗ ಯಾಕೆ ಎಂಬುದನ್ನು ಆಹಾರ ತಜ್ಞರು ಸೊಗಸಾಗಿ ಹೇಳಬಲ್ಲರು. ದೇಹ ತೂಕ ಇಳಿಸಿಕೊಳ್ಳುವುದಕ್ಕೆ ಆಗಿರಲಿ ಅಥವಾ ದೇಹವನ್ನು ವಿಷಾಂಶಮುಕ್ತಗೊಳಿಸಿಕೊಳ್ಳು ವುದಕ್ಕೆ ಆಗಿರಲಿ; ಸಿರಿಧಾನ್ಯಗಳು ನಮ್ಮ ದೈನಿಕ ಆಹಾರದಲ್ಲಿ ಸೇರಿಕೊಳ್ಳಲೇ ಬೇಕಾದ ಸೂಪರ್ ಫುಡ್ ಆಗಿವೆ. ಸಿರಿಧಾನ್ಯಗಳಿಂದ ಸಲಾಡ್, ಸೂಪ್ ಮತ್ತು ಸಸ್ಯಾಹಾರಿ ಬರ್ಗರ್ ಕೂಡ ತಯಾರಿಸಿಕೊಳ್ಳಬಹುದಾಗಿದೆ. ಇವು ಉತ್ಕೃಷ್ಟ ಆರೋಗ್ಯದಾಯಕ ಆಗಿರುವುದರಿಂದ ಯಾವಾಗ ಬೇಕಾದರೂ ಇವುಗಳನ್ನು ಸೇವಿಸಬಹುದಾಗಿದೆ. ರಾತ್ರಿಯೂಟಕ್ಕೆ ಕೂಡ ಸಿರಿಧಾನ್ಯ ಖಾದ್ಯಗಳನ್ನು ಸೇವಿಸಬಹುದು ಎಂಬುದಾಗಿ ತಜ್ಞರು ಹೇಳುತ್ತಾರೆ.
ಸಿರಿಧಾನ್ಯಗಳ ಆರೋಗ್ಯ ಲಾಭಗಳು:
ಜೀರ್ಣಕ್ರಿಯೆಯನ್ನು ಚೆನ್ನಾಗಿಸುತ್ತವೆ.
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಮುಪ್ಪಾಗುವಿಕೆಯನ್ನು ವಿಳಂಬಿಸುತ್ತವೆ
ಆರೋಗ್ಯವಂತ ಅಂಗಾಂಶ, ಜೀವಕೋಶಗಳನ್ನು ಹೆಚ್ಚಿಸುತ್ತವೆ
ಪೌಷ್ಟಿಕಾಂಶ ಮೌಲ್ಯ ಅತ್ಯುತ್ಕೃಷ್ಟವಾಗಿವೆ
ಪ್ರೊಟೀನ್, ವಿಟಮಿನ್‌ಗಳು, ನಾರಿನಂಶ ಮತ್ತು ಖನಿಜಾಂಶಗಳು ಹೇರಳವಾಗಿವೆ
ರಕ್ತದಲ್ಲಿ ಸಕ್ಕರೆಯಂಶದ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ
ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತವೆ ಹೃದ್ರೋಗಗಳು ಉಂಟಾಗದಂತೆ ತಡೆಯುತ್ತವೆ.
ಬೆಳ್ತಿಗೆ ಅನ್ನ, ಕುಚ್ಚಿಗೆ ಅನ್ನ ಮತ್ತು ಗೋಧಿಗಳಿಗಿಂತ ಸಿರಿಧಾನ್ಯಗಳು ಹೆಚ್ಚು ಆರೋಗ್ಯದಾಯಕವೇ?
ಬಹುತೇಕ ಭಾರತೀಯ ಮನೆಗಳಲ್ಲಿ ಮಧ್ಯಾಹ್ನ ಅಥವಾ ರಾತ್ರಿಯೂಟಕ್ಕೆ ಅನ್ನ ಅಥವಾ ಗೋಧಿಯೇ ಮೊದಲ ಆಯ್ಕೆಯಾಗಿರುತ್ತದೆ. ಆದರೆ ಅನ್ನ ಅಥವಾ ಗೋಧಿಗಿಂತ ಸಿರಿಧಾನ್ಯಗಳು ಹೆಚ್ಚು ಉತ್ತಮ ಆಯ್ಕೆ ಎಂಬುದಾಗಿ ಆಹಾರ ತಜ್ಞರು ಹೇಳುತ್ತಾರೆ. ಗೋಧಿಯಲ್ಲಿ ಗ್ಲುಟೆನ್ ಇದೆ; ಎಲ್ಲ ಬಗೆಯ ಅನ್ನದಲ್ಲಿ ಗ್ಲೈಸೇಮಿಕ್ ಇಂಡೆಕ್ಸ್ ಹೆಚ್ಚಿದೆ. ಆದರೆ ಸಿರಿಧಾನ್ಯಗಳಲ್ಲಿ ಇವೆರಡೂ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಅಲ್ಲದೆ ಪ್ರತೀ ಸಿರಿಧಾನ್ಯವೂ ಭಿನ್ನವಾದ ರುಚಿಯನ್ನು ಹೊಂದಿರುತ್ತದೆ ಮತ್ತು ಸೇವನೆಯ ಅನುಭವವೂ ವಿಭಿನ್ನವಾಗಿರುತ್ತದೆ. ಇದರಿಂದ ಸಿರಿಧಾನ್ಯಗಳ ಖಾದ್ಯಗಳು ಹೆಚ್ಚು ರುಚಿಕರ ಮತ್ತು ಸ್ವಾದಿಷ್ಟವಾಗಿರುತ್ತವೆ.
ರಾತ್ರಿಯೂಟಕ್ಕೆ ಸಿರಿಧಾನ್ಯಗಳು
ಸಾಮಾನ್ಯವಾಗಿ ರಾತ್ರಿಯೂಟ ಲಘುವಾಗಿರಬೇಕು ಎನ್ನುವುದಿದೆ. ಹಾಗೆ ಹೇಳುವುದಾದರೆ ಸಿರಿಧಾನ್ಯಗಳು ಪ್ರಧಾನ ಸಾಮಗ್ರಿಯಾಗಿರುವ ಅನೇಕ ಲಘು ರಾತ್ರಿಯೂಟ ರೆಸಿಪಿಗಳಿವೆ. ಆರೋಗ್ಯವಂತ ವ್ಯಕ್ತಿಗಳಿಗೆ ರಾತ್ರಿಯೂಟದ ಸರಿಯಾದ ಆಯ್ಕೆಯಾಗುವಂತೆ ಸಿರಿಧಾನ್ಯಗಳು ಪೌಷ್ಟಿಕಾಂಶ ಸಮೃದ್ಧ, ನಾರಿನಂಶ ಸಮೃದ್ಧ ಮತ್ತು ಗ್ಲೈಸೇಮಿಕ್ ಇಂಡೆಕ್ಸ್ ಕಡಿಮೆ ಇರುವ ಧಾನ್ಯಗಳಾಗಿವೆ. ಆದರೆ ಮಧುಮೇಹಿಗಳಿಗೆ, ದೇಹತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಫ್ಯಾಟಿ ಲಿವರ್ ಹೊಂದಿರುವವರಿಗೆ ಸಿರಿಧಾನ್ಯ ಖಾದ್ಯಗಳು ಮಧ್ಯಾಹ್ನದ ಊಟ ಅಥವಾ ಚಹಾದ ಜತೆಗಿನ ತಿನಿಸುಗಳಾಗಿ ಸೇವಿಸಲು ಯೋಗ್ಯ ಎಂದು ಆಹಾರ ತಜ್ಞರು ಹೇಳುತ್ತಾರೆ.
ಸಿರಿಧಾನ್ಯಗಳು ಒಟ್ಟಾರೆಯಾಗಿ ಆರೋಗ್ಯಪೂರ್ಣವಾಗಿದ್ದರೂ ಪಿಷ್ಟ ಹೆಚ್ಚು ಇರುವುದೇ ಇದಕ್ಕೆ ಕಾರಣ. ಪಿಷ್ಟ ಹೆಚ್ಚು ಇರುವ ಆಹಾರಗಳು ಬಿಡುಗಡೆ ಮಾಡುವ ಶಕ್ತಿಯನ್ನು ಹೆಚ್ಚು ಬಳಕೆ ಮಾಡುವ ಸಮಯದಲ್ಲಿ ಸೇವಿಸಲು ಯೋಗ್ಯ. ಆದರೆ ರಾತ್ರಿಯೂಟದ ಬಳಿಕ ನಮ್ಮ ದೇಹ ನೈಸರ್ಗಿಕವಾಗಿ ವಿಶ್ರಾಂತಿಯನ್ನು ಪಡೆಯುವುದರಿಂದ ದೇಹಕ್ಕೆ ಹೆಚ್ಚು ಶಕ್ತಿಯ ಅಗತ್ಯವಿರುವುದಿಲ್ಲ. ಅಲ್ಲದೆ ರಾತ್ರಿಯೂಟದ ಬಳಿಕ ನಮ್ಮಲ್ಲಿ ಹೆಚ್ಚಿನವರು ರಾತ್ರಿಯ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುವುದಿಲ್ಲ.
ರಾತ್ರಿಯೂಟಕ್ಕೆ ಉಪಯೋಗಿಸಬೇಕಾದ ಸಿರಿಧಾನ್ಯಗಳು
ನಮ್ಮ ಆಹಾರದಲ್ಲಿ ಒಂದು ಬಗೆಯ ಸಿರಿಧಾನ್ಯವನ್ನು ಉಪಯೋಗಿಸಬಹುದು ಎಂದೇನಿಲ್ಲ. ಹೆಚ್ಚು ಜನಪ್ರಿಯವಾಗಿರುವ ಮತ್ತು ಸುಲಭವಾಗಿ ಲಭ್ಯವಿರುವ ಕೆಲವು ಸಿರಿಧಾನ್ಯಗಳು ಎಂದರೆ ರಾಗಿ, ಜೋಳ, ಬರಗು, ಹಾರಕ, ಸಾಮೆ ಮತ್ತು ನವಣೆ. ಇವೆಲ್ಲವೂ ರಾತ್ರಿಯೂಟಕ್ಕೆ ಉತ್ತಮ ಎಂಬುದು ತಜ್ಞರ ಅಭಿಪ್ರಾಯ.
ರಾಗಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದರೆ ಜೋಳದಲ್ಲಿ ಝಿಂಕ್ ಸಮೃದ್ಧವಾಗಿದೆ, ಸಜ್ಜೆಯಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಆದರೆ ನವಣೆಯಲ್ಲಿ ಕಾಬೊìಹೈಡ್ರೇಟ್ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿರುತ್ತದೆ. ಸಿರಿಧಾನ್ಯಗಳನ್ನು ಸೇವಿಸಬಹುದಾದ ಒಂದು ಕುತೂಹಲಕಾರಿ ವಿಧಾನ ಎಂದರೆ ಹುದುಗು ಬರಿಸಿ ಅಂಬಲಿಯಂತೆ ಮಾಡಿಕೊಳ್ಳುವುದು.
ತಮಿಳುನಾಡಿನಲ್ಲಿ ಕೂಳ್, ರಾಜಸ್ಥಾನದಲ್ಲಿ ರಾಬ್, ಒಡಿಶಾದಲ್ಲಿ ಪೇಜ್ ಎಂಬ ಖಾದ್ಯಗಳಿವೆ. ಇವೆಲ್ಲವೂ ಸಿರಿಧಾನ್ಯ ಹಿಟ್ಟನ್ನು ರಾತ್ರಿಯಿಡೀ ಮಜ್ಜಿಗೆ ಅಥವಾ ನೀರಿನಲ್ಲಿ ನೆನೆಸಿಟ್ಟು ಬಳಿಕ ಬೇಯಿಸಿ ಅಂಬಲಿ ಮಾಡಿಕೊಂಡು, ಅನಂತರ ಸೇವಿಸುವುದಕ್ಕೆ ಮುನ್ನ ಅರ್ಧ ದಿನ ಹುದುಗು ಬರಿಸಿದ ಖಾದ್ಯಗಳು. ಈ ವಿಧಾನದಿಂದ ಅವುಗಳಲ್ಲಿರುವ ಪೌಷ್ಟಿಕಾಂಶಗಳ ಜೈವಿಕ ಲಭ್ಯತೆ ವೃದ್ಧಿಸುತ್ತದೆ, ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ ಮತ್ತು ಯಾರಿಗಾದರೂ ಕೂಡ ರುಚಿಸುವಂತೆ ಆಗುತ್ತದೆ.
ಕೊನೆಯದಾಗಿ ಹೆಚ್ಚು ವ್ಯಾಪಕವಾಗಿ ಗುರುತಿಸಿಕೊಳ್ಳಬೇಕಾದ ಮತ್ತು ಹೊಗಳುವಿಕೆಯೊಂದಿಗೆ ಸೇವಿಸಬೇಕಾಗಿರುವ ಸೂಪರ್‌ಫುಡ್‌ಗಳು ಸಿರಿಧಾನ್ಯಗಳು. ಇವು ಪೌಷ್ಟಿಕಾಂಶಗಳ ಸಮೃದ್ಧ ಮೂಲಗಳು, ನಮ್ಮ ಅಡುಗೆಯ ಸಂಸ್ಕೃತಿಗೆ ಯೋಗ್ಯವಾಗಿ ಹೊಂದಿಕೊಳ್ಳುವಂತಹವು ಮತ್ತು ಸಣ್ಣ ರೈತರಿಗೆ ಪ್ರಾಮುಖ್ಯವಾದ ಬೆಳೆಗಳಾಗಿವೆ.
“ಆರೋಗ್ಯಯುತ ಮತ್ತು ಸಮತೋಲಿತ ಆಹಾರಾಭ್ಯಾಸದ ಅವಿಭಾಜ್ಯ ಅಂಗವಾಗಿ ಸಿರಿಧಾನ್ಯಗಳ ಜಾದೂವನ್ನು ಅರಿಯಿರಿ!”
-ಮನೀಶಾ ಮೋಹನ್ ಕುಮಾರ್,
ಪಥ್ಯಾಹಾರ ತಜ್ಞೆ,
ಕೆಎಂಸಿ ಆಸ್ಪತ್ರೆ, ಅತ್ತಾವರ,
ಮಂಗಳೂರು