ಬಾಗಲಕೋಟೆ: ಪ್ರಜಾಪ್ರಭುತ್ವದ ಅಡಿಯಲ್ಲಿ ಇರುವ ನಮ್ಮ ದೇಶದ ಆಡಳಿತ ಗುಪ್ತ ಮತದಾನ ಮೂಲಕ ಆಯ್ಕೆಯಾದವರಿಂದ ನಡೆಯುತ್ತಿದ್ದು, ಮತದಾನ ಮತ್ತು ಚುನಾವಣೆಯ ಮಹತ್ವ ಅರಿಯುವುದು ಅಗತ್ಯವಾಗಿದೆ ಎಂದು ಜಿಪಂ ಸಿಇಒ ಟಿ. ಭೂಬಾಲನ್ ಹೇಳಿದರು.
ನವನಗರದ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ ಹಮ್ಮಿಕೊಂಡ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಪಾಠ ಬೋಧನೆ ಮಾಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಅತೀ ದೊಡ್ಡ ದೇಶವಾದ ಭಾರತದಲ್ಲಿ ಪ್ರಜೆಗಳೆ ಪ್ರಜೆಗಳಿಗಾಗಿ ಪ್ರಜೆಗಳಿಂದ ಆಡಳಿತ ನಡೆಸುವ ವ್ಯವಸ್ಥೆ ಇದ್ದು, ಚುನಾವಣೆಗಳಲ್ಲಿ ಗುಪ್ತ ಮತದಾನದಿಂದ ಪ್ರತಿನಿಧಿ ಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.
ಪ್ರತಿಯೊಬ್ಬ ಮಕ್ಕಳು ಮತದಾನದ ಮಹತ್ವ ಚುನಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪಾಲಕರಿಗೆ ನೆರೆಹೊರೆಯವರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಮಕ್ಕಳಿಗೆ ಮತದಾನ ಅರಿವು ಮೂಡಿಸಲು ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು, ಈಗಾಗಲೇ ತಾಲೂಕು ಮಟ್ಟದ ಆಯ್ಕೆಯಾಗಿ ಜಿಲ್ಲಾ ಮಟ್ಟಕ್ಕೆ ನಡೆಯಲಿರುವ ಸ್ಪರ್ಧೆಯಲ್ಲಿ ಆಯ್ಕೆಗೊಂಡು ರಾಜ್ಯ ಮಟ್ಟದಲ್ಲಿಯೂ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿಯೇ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಚುನಾವಣೆ ಮತ್ತು ಮತದಾನದ ಪ್ರಕ್ರಿಯೆಯ ಈ ಕಾರ್ಯಕ್ರಮವು ರಾಜ್ಯಕ್ಕೆ ಪ್ರಥಮ ಬರಬೇಕಾದರೆ ಎಲ್ಲರ ಶ್ರಮ ಅವಶ್ಯವಾಗಿದೆ ಎಂದು ಹೇಳಿದರು. ಆರ್.ಎಂ.ಎಸ್‌ನ ಯೋಜನಾ ಉಪ ಸಮನ್ವಯಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಎಸ್.ಎಸ್. ಬಿರಾದಾರ, ಉಪ ನಿರ್ದೇಶಕ (ಅಭಿವೃದ್ದಿ) ಬಿ.ಕೆ. ನಂದನೂರ, ನೋಡಲ್ ಅಧಿಕಾರಿ ಡಿ.ಎಂ. ಯಾವಗಲ್ಲ, ವಿಷಯ ಪರಿವೀಕ್ಷಕರಾದ ಎಸ್. ಎಸ್. ಹಾಲವರ, ಎಂ.ಎನ್. ಬಾಳಿಕಾಯಿ, ಮುಖ್ಯ ಗುರು ಆರ್.ಎಂ. ಮಕಾನದಾರ ಉಪಸ್ಥಿತರಿದ್ದರು.