Advertisement

ಕಾರ್ಮಿಕರಿಗೆ ಪ್ರೇರಣೆಯಾದ ಸಿಇಒ

03:48 PM Feb 21, 2020 | Suhan S |

ಬಾಗಲಕೋಟೆ: ಕೂಲಿ ಕಾರ್ಮಿಕರೊಂದಿಗೆ ತಾವು ಸಹ ಕೆಲಸದಲ್ಲಿ ಸಾಥ್‌ ನೀಡುವ ಮೂಲಕ ಜಿಪಂ ಸಿಇಒ ಗಂಗೂಬಾಯಿ ಮಾನಕರ ಕಾರ್ಮಿಕರಿಗೆ ಪ್ರೇರಣೆಯಾದರು.

Advertisement

ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹುನಗುಂದ ತಾಲೂಕಿನ ಮುಗುನೂರು ಗ್ರಾಪಂ ವ್ಯಾಪ್ತಿಯ ಜಮೀನಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಪಿಆರ್‌ಇಡಿಯಿಂದ ನಿರ್ಮಿಸಲಾಗುತ್ತಿರುವ ಚೆಕ್‌ ಡ್ಯಾಂ ಕಾಮಗಾರಿ ವೀಕ್ಷಣೆಯ ಭೇಟಿ ನೀಡಿದ ವೇಳೆ ಸ್ವತಃ ಜಿಪಂ ಸಿಇಒ ಕಾರ್ಮಿಕರೊಂದಿಗೆ ಮಣ್ಣು ಬುಟ್ಟಿಯಲ್ಲಿ ತುಂಬಿಕೊಂಡು ಟ್ರ್ಯಾಕ್ಟರ್‌ಗಳಲ್ಲಿ ಹಾಕಿದರು.

ಕಾರ್ಮಿಕರಿಗೆ ಕೇವಲ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಸಿಗುವುದಲ್ಲದೇ ತಮ್ಮ ಜಮೀನುಗಳಲ್ಲಿ ಕೃಷಿ ಹಾಗೂ ತೋಟಗಾರಿಕೆಯ ವಿವಿಧ ಚಟುವಟಿಕೆ ಕೈಗೊಂಡು ತಾವೇ ಕೆಲಸ ಮಾಡಿ ಕೂಲಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಉದ್ಯೋಗ ಖಾತರಿ ಯೋಜನೆ ದುಡಿಯುವ ಕೈಗಳಿಗೆ ಮಾತ್ರವಲ್ಲದೇ ರೈತರಿಗೂ ವರದಾನವಾಗಿ ಪರಿಣಮಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಕೃಷಿ ಹೊಂಡ ಕಾಮಗಾರಿಗಳನ್ನು ವೀಕ್ಷಿಸಿದರು.

ಮುಗನೂರು ವ್ಯಾಪ್ತಿಯ ಬಸರಿಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಶಾಲೆಗಳಿಗೆ ತೆರಳಿ ಶೌಚಾಲಯ ವೀಕ್ಷಿಸಿದರು. ನಂತರ ವಿವಿಧ ತರಗತಿಗಳ ಕೊಠಡಿಗೆ ತೆರಳಿ ಮಕ್ಕಳ ಕಲಿಕಾ ಮಟ್ಟ ಪರಿಶೀಲಿಸಿದರು. ನಂತರ ಬಸರಿಕಟ್ಟಿಯಿಂದ ಹೊರಟಾಗ ಹಾದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ನಡತೋಪು ವೀಕ್ಷಿಸಿದರು. ಈ ವೇಳೆ ವಲಯ ಅರಣ್ಯಧಿಕಾರಿ ಎಂ.ಎಂ.ಸಜ್ಜನ ಪ್ರಸಕ್ತ ಸಾಲಿನಲ್ಲಿ 190 ಕಿ.ಮೀ ನವರೆಗೆ ಗುರಿ ಹೊಂದಲಾಗಿತ್ತು. ಈ ಪೈಕಿ 192 ಕಿ.ಮೀ.ನಷ್ಟು ಗಿಡಗಳನ್ನು ನೆಡಸಲಾಗಿದೆ ಎಂದರು.

ರಕ್ಕಸಗಿ ಗ್ರಾಪಂ ವ್ಯಾಪ್ತಿಯ ಹೊನ್ನರಹಳ್ಳಿ ಗ್ರಾಮಕ್ಕೆ ತೆರಳಿದ ಮಾನಕರ ಸ್ವ-ಸಹಾಯ ಗುಂಪುಗಳಿಗೆ ನಿರ್ಮಿಸಲಾದ ವರ್ಕ್‌ ಶೆಡ್‌ ವೀಕ್ಷಿಸಿದರು. ವರ್ಕ್‌ ಶೆಡ್‌ನ‌ಲ್ಲಿರುವ ಸ್ವ-ಸಹಾಯ ಗುಂಪುಗಳಿಗೆ ಇರುವ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಅವರು ತಯಾರಿಸಿದ ಬ್ಯಾಗ್‌ಗಳನ್ನು ವೀಕ್ಷಿಸಿ, ವಿವಿಧ ಕೌಶಲ್ಯ ತರಬೇತಿ, ಸಾಲ ಸೌಲಭ್ಯ, ಆರ್ಥಿಕ ಸಹಾಯಧನ, ತಿಂಡಿ ತಿನಿಸುಗಳ ತಯಾರಿಸುವದರಿಂದ ಉತ್ತಮ ಆದಾಯ ಪಡೆಯಬಹುದಾಗಿದೆ ಎಂದು ಸಿಇಒ ಮಾನಕರ ತಿಳಿಸಿದರು.

Advertisement

ಸ್ವ-ಸಹಾಯ ಗುಂಪುಗಳಿಗೆ ವರ್ಕ್‌ಶೆಡ್‌ ನಿರ್ಮಿಸಿ ಕೊಡಲಾಗುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 6 ವರ್ಕಶೆಡ್‌ ಕಾಮಗಾರಿಗಳು ನಡೆಸಲಾಗುತ್ತಿದೆ. ಜಮಖಂಡಿ ತಾಲೂಕಿನ ಕಣ್ಣೂರ ಗ್ರಾಪಂ ವ್ಯಾಪ್ತಿಯಲ್ಲಿ 2, ಸಾವಳಗಿಯಲ್ಲಿ 1, ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಹಾಗೂ ತುಳಸಿಗೇರಿಯಲ್ಲಿ ತಲಾ 1 ಹಾಗೂ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಪಂ ವ್ಯಾಪ್ತಿಯ ಹೊನ್ನರಹಳ್ಳಿಯಲ್ಲಿ 1 ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹುನಗುಂದ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪುಷ್ಪಾ ಕಮ್ಮಾರ, ಪಂಚಾಯತ ರಾಜ್‌ ಇಲಾಖೆಯ ಸಹಾಯಕ ಅಭಿಯಂತರ ಎಂ.ಎಂ. ಪಾಟೀಲ, ಎಡಿಪಿಸಿಯ ನಾಗರಾಜ ರಾಜನಾಳ, ಜಿಲ್ಲಾ ಐಇಸಿ ಸಂಯೋಜಕ ಪವನ ಕುಲಕರ್ಣಿ, ಜಿಲ್ಲಾ ಎಂಐಎಸ್‌ ಸಂಯೋಜಕ ಉಜ್ವಲ ಸಕ್ರಿ, ತಾಲೂಕಾ ಐಇಸಿ ಸಂಯೋಜಕಿ ಸುವರ್ಣ ಭಜಂತ್ರಿ, ತಾಂತ್ರಿಕ ಸಯೋಜಕ ವಿಜಯಕುಮಾರ ಚಿಂದಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಎಂ.ಎಸ್‌. ಗೋಡಿ, ಹುಲ್ಲಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next