Advertisement

ಮೊದಲೆರಡು ಟೆಸ್ಟ್‌ ಗಳಲ್ಲಿ ಸೆಂಚುರಿ: ಅಬಿದ್‌ ಅಲಿ ದಾಖಲೆ; ಪಾಕ್‌ ಮೇಲುಗೈ

11:21 PM Dec 21, 2019 | Sriram |

ಕರಾಚಿ: ಪಾಕಿಸ್ಥಾನದ ಆರಂಭಕಾರ ಅಬಿದ್‌ ಅಲಿ ತಾನಾಡಿದ ಮೊದಲ ಎರಡೂ ಟೆಸ್ಟ್‌ಗಳಲ್ಲಿ ಶತಕ ಬಾರಿಸಿದ ಪಾಕಿಸ್ಥಾನದ ಮೊದಲ ಹಾಗೂ ವಿಶ್ವದ 9ನೇ ಕ್ರಿಕೆಟಿಗನೆಂಬ ದಾಖಲೆಗೆ ಪಾತ್ರರಾಗಿದ್ದಾರೆ. ಪ್ರವಾಸಿ ಶ್ರೀಲಂಕಾ ಎದುರಿನ ಕರಾಚಿ ಟೆಸ್ಟ್‌ ಪಂದ್ಯದ 3ನೇ ದಿನದಾಟದಲ್ಲಿ ಅವರು ಈ ಸಾಧನೆ ಮಾಡಿದರು.

Advertisement

ರಾವಲ್ಪಿಂಡಿಯ ಪದಾರ್ಪಣ ಟೆಸ್ಟ್‌ ಪಂದ್ಯದಲ್ಲಿ 109 ರನ್‌ ಬಾರಿಸಿದ ಅಬಿದ್‌ ಅಲಿ, ಕರಾಚಿ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ ನಲ್ಲಿ 174 ರನ್‌ ಹೊಡೆದರು (281 ಎಸೆತ, 21 ಬೌಂಡರಿ, 1 ಸಿಕ್ಸರ್‌). ಮತ್ತೋರ್ವ ಆರಂಭಕಾರ ಶಾನ್‌ ಮಸೂದ್‌ 135 ರನ್‌ ಮಾಡಿದರು (198 ಎಸೆತ, 7 ಬೌಂಡಿ, 3 ಸಿಕ್ಸರ್‌). ಇವರಿಬ್ಬರ ಮೊದಲ ವಿಕೆಟ್‌ ಜತೆಯಾಟದಲ್ಲಿ 278 ರನ್‌ ಹರಿದು ಬಂತು. 3ನೇ ದಿನದಾಟ ಅಂತ್ಯಕ್ಕೆ ಪಾಕಿಸ್ಥಾನ 2 ವಿಕೆಟಿಗೆ 395 ರನ್‌ ಗಳಿಸಿದ್ದು, 315 ರನ್ನುಗಳ ಮುನ್ನಡೆಯಲ್ಲಿದೆ.

ಅಜರುದ್ದೀನ್‌ 3 ಶತಕ
ಭಾರತದ ಮೊಹಮ್ಮದ್‌ ಅಜರುದ್ದೀನ್‌ ತಮ್ಮ ಮೊದಲ 3 ಟೆಸ್ಟ್‌ಗಳಲ್ಲಿ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 1984ರ ಇಂಗ್ಲೆಂಡ್‌ ಎದುರಿನ ತವರಿನ ಸರಣಿಗಳಲ್ಲಿ ಅವರು ಈ ಸಾಧನೆಗೈದಿದ್ದರು.

ಮೊದಲೆರಡು ಟೆಸ್ಟ್‌ಗಳಲ್ಲಿ ಶತಕ ಹೊಡೆದ ಇತರ ಕ್ರಿಕೆಟಿಗರೆಂದರೆ ಆಸ್ಟ್ರೇಲಿಯದ ವಿಲಿಯಂ ಪೋನ್ಸ್‌ಫೋರ್ಡ್‌, ಡಗ್‌ ವಾಲ್ಟರ್, ಗ್ರೆಗ್‌ ಬ್ಲೆವೆಟ್‌; ಭಾರತದ ಸೌರವ್‌ ಗಂಗೂಲಿ, ರೋಹಿತ್‌ ಶರ್ಮ; ವೆಸ್ಟ್‌ ಇಂಡೀಸಿನ ಅಲ್ವಿನ್‌ ಕಾಳೀಚರಣ್‌ ಮತ್ತು ನ್ಯೂಜಿಲ್ಯಾಂಡಿನ ಜಿಮ್ಮಿ ನೀಶಮ್‌.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-191 ಮತ್ತು 2 ವಿಕೆಟಿಗೆ 395 (ಅಬಿದ್‌ ಅಲಿ 174, ಶಾನ್‌ ಮಸೂದ್‌ 135, ಲಹಿರು ಕುಮಾರ 88ಕ್ಕೆ 2). ಶ್ರೀಲಂಕಾ-271.

Advertisement
Advertisement

Udayavani is now on Telegram. Click here to join our channel and stay updated with the latest news.

Next