ಹೊನ್ನಾಳಿ: ಇದು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ನಿರ್ಮಿಸಿದ ಸೇತುವೆ. ಸೇತುವೆ ನಿರ್ಮಿಸಿ ನೂರು ವರ್ಷಗಳಾಗುತ್ತ ಬಂದರೂ ಇನ್ನೂ ಸುಭದ್ರ. ಅದುವೇ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 25ರಲ್ಲಿ ಹೊನ್ನಾಳಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಹೊನ್ನಾಳಿಯ ತುಂಗಭದ್ರಾ ನದಿ ಸೇತುವೆ.
ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಧರ್ಮಸ್ಥಳ, ಮಂಗಳೂರು, ಉಡುಪಿ-ಮಣಿಪಾಲ, ಮೈಸೂರು, ಹಾಸನ, ಶ್ರವಣಬೆಳಗೊಳ ಇತ್ಯಾದಿ ದಕ್ಷಿಣ ಹಾಗೂ ಕರಾವಳಿ ಕರ್ನಾಟಕದ ಧಾರ್ಮಿಕ, ಐತಿಹಾಸಿಕ ಕ್ಷೇತ್ರಗಳಿಗೆ ತೆರಳಲು ಈ ಸೇತುವೆಯ ಮೂಲಕವೇ ಸಂಚರಿಸಬೇಕು. ಹಾಗಾಗಿ, ಉತ್ತರ-ದಕ್ಷಿಣ ಕರ್ನಾಟಕ ಬೆಸೆಯುವ ಏಕೈಕ ಸಂಪರ್ಕ ಸೇತುವೆ ಇದು. ಈಗ ಕೆಆರ್‌ಡಿಸಿಎಲ್ ಈ ಸೇತುವೆ ಅಭಿವೃದ್ಧಿಗೆ ಮುಂದಾಗಿದೆ.
ಸರ್ ಎಂ. ವಿಶ್ವೇಶ್ವರಯ್ಯ ಅವರ ಕನಸಿನ ಕೂಸಾಗಿರುವ ಈ ಸೇತುವೆ ನಿರ್ಮಾಣ ಕಾರ್ಯ 1918ರಲ್ಲಿ ಪ್ರಾರಂಭಗೊಂಡು 1922ಕ್ಕೆ ಪೂರ್ಣಗೊಂಡಿತು. ಕೇವಲ 3.22 ಲಕ್ಷ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಯಿತು. ಗುಣಮಟ್ಟದ ಸೈಜು ಕಲ್ಲುಗಳು, ಸುಣ್ಣದ ಕಲ್ಲು, ಬೆಲ್ಲ, ಮರಳು ಇತ್ಯಾದಿ ವಸ್ತುಗಳಿಂದ ನಿರ್ಮಾಣಗೊಂಡಿರುವ ಈ ಸೇತುವೆಯ ಒಂದೊಂದು ಅಡಿಯೂ ಇಂದಿಗೂ ಸುಭದ್ರವಾಗಿರುವುದು ಅಂದಿನ ಜನರ ಕಾರ್ಯದಕ್ಷತೆ, ನೈಪುಣ್ಯತೆಗೆ ಸಾಕ್ಷಿಯಾಗಿದೆ. 15 ಮೀಟರ್‌ಗಳಷ್ಟು ಅಗಲದ ಒಟ್ಟು 21 ಕಮಾನುಗಳ ಮೇಲೆ ಈ ಸೇತುವೆ ನಿಂತಿದೆ. ಸೇತುವೆಯ ಎರಡು ಬದಿಯ ನಡುವಿನ ಅಂತರ 5 ಮೀಟರ್ ಇದೆ. ನದಿ ನೀರಿನ ಹರಿವಿನ ಅಗಲ 365 ಮೀಟರ್ ಗಳಷ್ಟಾಗಿದ್ದು, ಇಂದಿಗೂ ಸೇತುವೆಯ ಒಂದಿಂಚೂ ಹಾಳಾಗದಿರುವುದು ವಿಶೇಷ.
ಇದೀಗ ಕೆಆರ್‌ಡಿಸಿಎಲ್ ಹೊನ್ನಾಳಿ ಪೊಲೀಸ್ ಠಾಣೆಯ ಸಮೀಪದಿಂದ ಸೇತುವೆಯವರೆಗೆ ಹಾಗೂ ಇನ್ನೊಂದು ಬದಿ ಗೊಲ್ಲರಹಳ್ಳಿ ಸಂಪರ್ಕ ರಸ್ತೆಯವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಸೇತುವೆ ಮೇಲಿನ ರಸ್ತೆಯನ್ನೂ ಸುಸಜ್ಜಿತವಾಗಿ ನವೀಕರಿಸಲಾಗುತ್ತಿದೆ. ಸೇತುವೆ ಮೇಲೆ ಬಿದ್ದ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಗೂ ಆಧುನಿಕ ರೂಪ ನೀಡಲಾಗುತ್ತಿದೆ.
ಸೇತುವೆಯ ಆಚೆ-ಈಚೆಯ ರಸ್ತೆಯನ್ನು ಸುಮಾರು ನಾಲ್ಕು ಅಡಿಗಳಷ್ಟು ಆಳದವರೆಗೆ ಅಗೆದು, ಜೆಲ್ಲಿ ಕಲ್ಲು ಹಾಕಿ ಭದ್ರಪಡಿಸಲಾಗುತ್ತಿದೆ. ಅದರ ಮೇಲೆ ಡಾಂಬರೀಕರಣ ಮಾಡಲಾಗುತ್ತಿದೆ. ಒಟ್ಟಿನಲ್ಲಿ, ಹೊಸ ಸೇತುವೆ ನಿರ್ಮಾಣಗೊಂಡ ಬಳಿಕ ಹಳೇ ಸೇತುವೆಯನ್ನು ಕಡೆಗಣಿಸದೇ ಅದಕ್ಕೆ ಕಾಯಕಲ್ಪ ನೀಡುವ ಮೂಲಕ ಬಳಕೆಗೆ ಯೋಗ್ಯವಾಗಿ ಇಟ್ಟುಕೊಳ್ಳುವ ಕೆಲಸ ನಡೆಯುತ್ತಿರುವುದು ಈ ಭಾಗದ ಜನರು, ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ.
ಸೇತುವೆಯ ಎರಡೂ ಬದಿಗಳ ತಡೆಗೋಡೆಗಳಿಗೆ ಸುಣ್ಣ ಬಳಿಯುವುದು ಸೇರಿದಂತೆ ಕಾಲಕಾಲಕ್ಕೆ ಈ ಸೇತುವೆಯ ನಿರ್ವಹಣಾ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಿರುವುದರಿಂದ ತುಂಗಭದ್ರಾ ನದಿ ಸೇತುವೆ ಸುಭದ್ರವಾಗಿದೆ ಎನ್ನುತ್ತಾರೆ ಕೆಆರ್‌ಡಿಸಿಎಲ್‌ನ ಇಂಜಿನಿಯರ್ ಲಿಂಗರಾಜು.
ಜನಸಂಚಾರ ಹಾಗೂ ವಾಹನ ದಟ್ಟಣೆ ಹೆಚ್ಚಿದಂತೆ ಹಳೆಯ ಸೇತುವೆ ಚಿಕ್ಕದೆನಿಸತೊಡಗಿತ್ತು. ಹೀಗಾಗಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸ ದೊಡ್ಡ ಸೇತುವೆ ನಿರ್ಮಾಣಕ್ಕಾಗಿ 21 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಕಳೆದ ಸುಮಾರು ಒಂದು ವರ್ಷದ ಹಿಂದೆ ಹೊಸ ದ್ವಿಪಥ ಸೇತುವೆ ಉದ್ಘಾಟನೆ ನೆರವೇರಿ ಹೆಚ್ಚಿನ ವಾಹನಗಳೆಲ್ಲ ಈಗ ಹೊಸ ಸೇತುವೆ ಮೇಲೆಯೇ ಸಂಚರಿಸುತ್ತಿವೆ. ಚಿಕ್ಕ ಪುಟ್ಟ ವಾಹನಗಳು ಮಾತ್ರ ಹಳೆಯ ಸೇತುವೆ ಮೇಲೆ ಸಾಗುತ್ತವೆ.