ನವದೆಹಲಿ: ನನ್ನ ಮಾತನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ. ಕೇಂದ್ರ ಸರ್ಕಾರ ತನ್ನ ನೂತನ ಕೃಷಿ ಮಸೂದೆಯನ್ನು ಹಿಂಪಡೆಯಲೇಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿನ ಅವನಿಯಪುರಂ ನಲ್ಲಿ ನಡೆದ ‘ಜಲ್ಲಿಕಟ್ಟು’ ಕ್ರೀಡೆಯನ್ನು ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಇವರು “ನನ್ನ ಮಾತನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ, ಕೇಂದ್ರ ಸರ್ಕಾರವು ರೈತ ವಿರೋಧಿಯಾಗಿ ರೂಪಿಸಲು ಹೊರಟಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಲೇಬೇಕಾದ ಅನಿವಾರ್ಯತೆ ಇದೆ. ಈ ಮಾತನ್ನು ಸರಿಯಾಗಿ ಗಮನದಲ್ಲಿಟ್ಟುಕೊಳ್ಳಿ ಎಂದಿದ್ದಾರೆ.
ಕೋವಿಡ್ ಸೋಂಕಿನ ಸಮಯದಲ್ಲಿ ಸರ್ಕಾರ ಜನರ ಪರ ನಿಲ್ಲಲಿಲ್ಲ. ಇದೀಗ ತನ್ನ 2-3 ಜನ ಉದ್ಯಮಿಗಳ ಒಳಿತಿಗಾಗಿ ದೇಶದ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಕೇವಲ ಮಲ್ಟಿ ನ್ಯಾಷನಲ್ ಕಂಪನಿಗಳ ಹಿತದೃಷ್ಟಿಯಿಂದ ಈ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಸಿಡಿ ರಾಜಕಾರಣ ಬಿಜೆಪಿ ಮುಕ್ತ ಕರ್ನಾಟಕಕ್ಕೆ ಮುನ್ನುಡಿ : ಶಾಸಕ ಪ್ರಿಯಾಂಕ್ ಖರ್ಗೆ ಟ್ವಿಟ್
ಈ ನಡುವೆ ನೀವು ದೇಶದ ಪ್ರಧಾನಿಯೇ ಅಥವಾ 2-3 ಜನ ಉದ್ಯಮ ಸ್ನೇಹಿತರ ಪ್ರಧಾನಿಯೇ ಎಂದು ನರೆಂದ್ರ ಮೋದಿಯವರನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ತಮ್ಮ ಉದ್ಯಮ ಸ್ನೇಹಿತರ ಹಿತಕ್ಕಾಗಿ ರೈತ ಚಳುವಳಿಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ನುಡಿದರು.
ಇದನ್ನೂ ಓದಿ:
ಕೋವಿಡ್ ಗೆ ರಾಮಬಾಣ: ಮಂಡ್ಯ ಜಿಲ್ಲೆಗೆ ಬಂದಿಳಿದ ಕೋವಿಶೀಲ್ಡ್ ಲಸಿಕೆ
ರೈತರು ದೇಶದ ಬೆನ್ನೆಲುಬು. ಅವರ ಮೇಲೆ ದಬ್ಬಾಳಿಕೆ ನಡೆಸಿ ದೇಶವನ್ನು ಮುನ್ನಡೆಸಬಹುದು ಎಂಬ ಭಾವನೆ ಇದ್ದರೆ ಇತಿಹಾಸವನ್ನು ಒಮ್ಮೆ ಗಮನಿಸಿ ಎಂದಿರುವ ಇವರು, ಇತಿಹಾಸದಲ್ಲಿ ರೈತರು ದುರ್ಬಲವಾದಾಗಲೆಲ್ಲಾ ದೇಶ ದುರ್ಬಲಗೊಂಡಿದೆ ಎಂದರು.