ನವದೆಹಲಿ/ಢಾಕಾ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಸಿರುವ ಕೇಂದ್ರ ಸರ್ಕಾರ, ಇದೀಗ ರಾಜ್ಯ ಸರ್ಕಾರಗಳಿಗೂ ವ್ಯಾಟ್ ಕಡಿತ ಮಾಡುವಂತೆ ಆಗ್ರಹಿಸಿದೆ. ಈ ಮೂಲಕ ತೈಲ ದರ ಇಳಿಕೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.
ಮಂಗಳವಾರವಷ್ಟೇ 2 ರೂ. ಅಬಕಾರಿ ಸುಂಕ ಇಳಿಸಿದ್ದರಿಂದ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 69.44 ರೂ. ಮತ್ತು 56.96 ರೂ.ಗೆ ಇಳಿಕೆಯಾಗಿದೆ. ಇದನ್ನೇ ಮುಂದಿಟ್ಟುಕೊಂಡಿರುವ ಕೇಂದ್ರ ಸರ್ಕಾರ, ಅಬಕಾರಿ ಸುಂಕದ ಕಡಿತದಿಂದ ಕೇಂದ್ರದ ಬೊಕ್ಕಸಕ್ಕೆ 46 ಸಾವಿರ ಕೋಟಿ ರೂ. ಹೊಡೆತ ಬೀಳುತ್ತದೆ. ಆದರೂ ಇದನ್ನು ಲೆಕ್ಕಿಸದೇ ಕಡಿತ ಮಾಡಿದ್ದೇವೆ ಎಂದು ಹೇಳಿದೆ.
ಇದಷ್ಟೇ ಅಲ್ಲ, 2 ರೂ. ಕಡಿತ ಮಾಡುವ ಮೂಲಕ ಜನರಿಗೆ ಕೊಂಚ ಸಮಾಧಾನ ನೀಡಿದ್ದೇವೆ. ಹೀಗಾಗಿ ಎಲ್ಲ ರಾಜ್ಯಗಳು ತೈಲದ ಮೇಲಿನ ವ್ಯಾಟ್ ಅನ್ನು ಶೇ.5 ರಷ್ಟು ಕಡಿತ ಮಾಡಬೇಕು ಎಂದು ಕೇಂದ್ರ ಸರ್ಕಾರ ಆಗ್ರಹಿಸಿದೆ. ಬಾಂಗ್ಲಾದಲ್ಲಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, “ದೆಹಲಿ, ಕೇರಳ ಸರ್ಕಾರಗಳು ಅಬಕಾರಿ ಸುಂಕ ಇಳಿಕೆ ಮಾಡುವಂತೆ ಒತ್ತಾಯ ಮಾಡುತ್ತಿದ್ದವು. ನಾವು ಮಾಡಿದ್ದೇವೆ. ರಾಜ್ಯ ಸರ್ಕಾರಗಳೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸುವ ವ್ಯಾಟ್ ಅಥವಾ ಮಾರಾಟ ತೆರಿಗೆಯಲ್ಲಿ ಶೇ.5ರಷ್ಟು ತಗ್ಗಿಸಬೇಕು. ಇದರಿಂದ ಸಾರ್ವಜನಿಕರಿಗೆ ಮತ್ತಷ್ಟು ಹೊರೆ ತಗ್ಗಿದಂತಾಗುತ್ತದೆ’ ಎಂದು ಹೇಳಿದ್ದಾರೆ. ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಇದೇ ಒತ್ತಾಯ ಮಾಡಿದ್ದಾರೆ.
ರಾಜ್ಯಗಳಿಗೇ ಹೆಚ್ಚಿನ ಪಾಲು: ಢಾಕಾದಲ್ಲಿ ಮಾತನಾಡಿದ ಜೇಟ್ಲಿ ಪದೇ ಪದೆ ಏರುತ್ತಿರುವ ಪೆಟ್ರೋಲ್, ಡೀಸೆಲ್ ದರದಿಂದ ದೇಶದ ಜನರಿಗೆ ತೊಂದರೆಯುಂಟಾಗುವುದನ್ನು ತಪ್ಪಿಸಲು ಕೇಂದ್ರ ಈ ನಿರ್ಧಾರ ಕೈಗೊಂಡಿದೆ. ತೈಲೋತ್ಪನ್ನಗಳ ಮಾರಾಟದಿಂದ ಸಂಗ್ರಹವಾಗುವ ತೆರಿಗೆಯ ಹೆಚ್ಚಿನ ಪ್ರಮಾಣ ರಾಜ್ಯಗಳಿಗೇ ಹೋಗುತ್ತದೆ. ಮಾರಾಟ ತೆರಿಗೆಯ ಸಂಗ್ರಹದ ಜತೆಗೆ ಕೇಂದ್ರ ಸರ್ಕಾರದ ವತಿಯಿಂದ ಶೇ.42ರಷ್ಟು ತೆರಿಗೆಯ ಪಾಲೂ ಅವುಗಳಿಗೆ ಸಿಗುತ್ತದೆ ಎಂದು ಹೇಳಿದ್ದಾರೆ.
ಹೀಗಾಗಿ ಕೇಂದ್ರ ಸರ್ಕಾರ ನಷ್ಟವನ್ನು ತಾಳಿಕೊಳ್ಳುವಂತೆ ರಾಜ್ಯಗಳೂ ನಡೆದುಕೊಳ್ಳಬೇಕೆಂದು ಕೇಂದ್ರ ಹಣಕಾಸು ಸಚಿವರು ಒತ್ತಾಯಿಸಿದ್ದಾರೆ. ತೆರಿಗೆ ಕಡಿತದಿಂದಾಗಿ ಕೇಂದ್ರ ಮತ್ತು ರಾಜ್ಯಗಳಿಗೆ ತೊಂದರೆಯಾಗುವುದು ನಿಜ. ಆದರೆ ಅರ್ಥ ವ್ಯವಸ್ಥೆ ಬೆಳವಣಿಗೆಯ ಹಾದಿಯಲ್ಲಿರುವುದರಿಂದ ಉಂಟಾಗಿರುವ ನಷ್ಟವನ್ನು ಸರಿತೂಗಿಸಿಕೊಳ್ಳಲು ಅವಕಾಶ ಉಂಟು ಎಂದು ಜೇಟ್ಲಿ ಪ್ರತಿಪಾದಿಸಿದ್ದಾರೆ. “ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಲ್ಲಿರುವಾಗ ಗ್ರಾಹಕರಿಗೆ ಅದರ ಪ್ರಭಾವ ತಟ್ಟದಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ, ಈ ನಿಟ್ಟಿನಲ್ಲಿ ಸಮಯಕ್ಕೆ ತಕ್ಕಂತೆ ನಡೆದುಕೊಳ್ಳಲಾಗಿದೆ’ ಎಂದಿದ್ದಾರೆ ಜೇಟ್ಲಿ.
ರಾಜ್ಯಗಳೇ ನಿರ್ವಹಿಸಬೇಕು: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವ್ಯಾಟ್ ಕಡಿಮೆಗೊಳಿಸಲು ಸಾಧ್ಯವುಂಟೇ ಎಂದು ಪ್ರಶ್ನಿಸಿದಾಗ “ರಾಜ್ಯ ಸರ್ಕಾರಗಳೇ ಅವುಗಳ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸಬೇಕು. ಏಕೆಂದರೆ ಅವರೂ ಜನರಿಗೆ ಹತ್ತಿರವಾಗಿದ್ದಾರೆ. ಶೇ.40ರಷ್ಟು ತೆರಿಗೆಯನ್ನು ವ್ಯಾಟ್ ಮೂಲಕ ಅವುಗಳು ವಿಧಿಸುತ್ತವೆ’ ಎಂದು ಹೇಳಿದ್ದಾರೆ ಜೇಟ್ಲಿ.
ಪತ್ರ ಬರೆಯಲಿದ್ದಾರೆ ಜೇಟ್ಲಿ: ನವದೆಹಲಿಯಲ್ಲಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯ ಸರ್ಕಾರಗಳಿಗೆ ಇದೇ ಮನವಿ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯ ಸರ್ಕಾರಗಳಿಗೆ ಪ್ರತ್ಯೇಕವಾಗಿ ಪತ್ರ ಬರೆಯಲಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲೂ ಭಾರಿ ತೆರಿಗೆ
ತೈಲದ ಪ್ರತಿ ಲೀಟರ್ ಮೂಲ ಬೆಲೆಯ ಜತೆಗೆ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ, ಮಾರುಕಟ್ಟೆ ಕಮಿಷನ್ ಜತೆಗೆ ಸಾಗಣೆ ವೆಚ್ಚ ಹಾಗೂ ಡೀಲರ್ ಕಮೀಷನ್ ಒಟ್ಟುಗೂಡಿಸಿದ ಮೊತ್ತದ ಮೇಲೆ ಪೆಟ್ರೋಲ್ ಮೇಲೆ ಶೇ.30 ಹಾಗೂ ಡೀಸೆಲ್ ಮೇಲೆ ಶೇ.19ರಷ್ಟು ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ವಿಧಿಸುತ್ತಿದೆ. ರಾಜ್ಯ ಸರ್ಕಾರ ಈ ಹಿಂದೆ ವಿಧಿಸುತ್ತಿದ್ದ ಪ್ರವೇಶ ತೆರಿಗೆಯು ಜಿಎಸ್‌ಟಿ ಜಾರಿಯಾದ ಜು.1ರಿಂದ ಸ್ಥಗಿತಗೊಂಡಿದೆ.
ಪೆಟ್ರೋಲ್, ಡೀಸೆಲ್ ಮೇಲೆ ಅಬಕಾರಿ ಸುಂಕ 2 ರೂ. ಇಳಿಕೆ ಮಾಡಿ ನಿರ್ಧಾರ ಕೈಗೊಂಡಿರುವ ಮೋದಿ ಸರ್ಕಾರದ ಕ್ರಮ ಸರಿಯಾದದ್ದು. ಇದರಿಂದಾಗಿ ಕೇಂದ್ರ ಜನ ಸಾಮಾನ್ಯರತ್ತ ಗಮನ ನೀಡುತ್ತಿದೆ ಎಂದು ಸಾಬೀತಾಗಿದೆ.
– ಅಮಿತ್ ಶಾ, ಬಿಜೆಪಿ ಅಧ್ಯಕ್ಷ