Advertisement

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ

09:45 PM Mar 31, 2023 | Team Udayavani |

ನವದೆಹಲಿ: ಮುಂದಿನ ದಿನಗಳಲ್ಲಿ ದೇಶದ ರೂಪಾಯಿಯೇ ವಿದೇಶಗಳ ರಾಷ್ಟ್ರಗಳ ಜತೆಗಿನ ವಹಿವಾಟಿನಲ್ಲಿ ಪ್ರಧಾನ ಪಾತ್ರ ವಹಿಸಲಿದೆ. ಅದಕ್ಕಾಗಿ ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಶುಕ್ರವಾರ ಪ್ರಕಟಿಸಲಾಗಿರುವ ಹೊಸ ವಿದೇಶ ವ್ಯಾಪಾರ ನೀತಿಯಲ್ಲಿ ಈ ಘೋಷಣೆ ಮಾಡಲಾಗಿದೆ.

Advertisement

ವಿಶೇಷವಾಗಿ ಡಾಲರ್‌ ಕೊರತೆ ಇರುವ ರಾಷ್ಟ್ರಗಳ ಜತೆಗೆ ಅಥವಾ ಕರೆನ್ಸಿ ಕೊರತೆ ಇರುವ ದೇಶಗಳ ಜತೆಗೆ ಇಂಥ ವಹಿವಾಟಿಗೆ ಆದ್ಯತೆ ನೀಡಲಾಗುತ್ತದೆ. ಈ ಮೂಲಕ ಅಮೆರಿಕದ ಡಾಲರ್‌ಗೆ ಸಮನಾಗಿ ಜಗತ್ತಿನ ವ್ಯಾಪಾರ ಕ್ಷೇತ್ರದಲ್ಲಿ ದೇಶದ ಕರೆನ್ಸಿಯನ್ನು ಬಿಂಬಿಸುವ ಪ್ರಯತ್ನ ಮಾಡಲಾಗಿದೆ ಎಂದು ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಹೊಸ ವಿದೇಶ ವ್ಯಾಪಾರ ನೀತಿ ಬಿಡುಗಡೆಗೊಳಿಸಿದ ಬಳಿಕ ಅವರು ಮಾತಾಡಿದರು. 2030ರ ವೇಳೆಗೆ ದೇಶದ ರಫ್ತು ಪ್ರಮಾಣವನ್ನು 2 ಲಕ್ಷಕೋಟಿ ಡಾಲರ್‌ಗೆ ವೃದ್ಧಿಸಲು ಪ್ರಧಾನ ಆದ್ಯತೆ ನೀಡಲಾಗಿದೆ. ಈ ಬಾರಿಯ ವಿಶೇಷವೆಂದರೆ, ಐದು ವರ್ಷಗಳಿಗೆ ಅನ್ವಯವಾಗುವಂತೆ ಪ್ರಕಟಿಸಲಾಗುತ್ತಿದ್ದ ನಿಯಮವನ್ನು ಮುರಿಯಲಾಗಿದೆ. ಜಗತ್ತಿನ ಔದ್ಯಮಿಕ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ನೀತಿಯನ್ನು ಉನ್ನತೀಕರಿಸುವಂತೆಯೂ ಸರಳೀಕರಿಸಲಾಗಿದೆ.

ಇಂದಿನಿಂದಲೇ ಜಾರಿ:
ಏ.1ರಿಂದಲೇ ಹೊಸ ನೀತಿ ಜಾರಿಯಾಗಲಿದೆ. ಅದರಂತೆ, ಮುಂದಿನ 4-5 ತಿಂಗಳ ಅವಧಿಯಲ್ಲಿ ವಿವಿಧ ವಿಭಾಗಗಳ ಅನ್ವಯ, ದೇಶಗಳಿಗೆ ಅನುಸಾರವಾಗಿ ಸರ್ಕಾರದ ಪ್ರತಿನಿಧಿಗಳು ಪ್ರವಾಸ ಕೈಗೊಂಡು, ದೇಶದಲ್ಲಿ ಹೂಡಿಕೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಲಿದ್ದಾರೆ ಎಂದೂ ಸಚಿವ ಗೋಯಲ್‌ ತಿಳಿಸಿದರು.

ಕೇಂದ್ರ ಸರ್ಕಾರ ಮಾ.14ರಂದು ಸಂಸತ್‌ಗೆ ನೀಡಿದ ಉತ್ತರದಲ್ಲಿ ಜಗತ್ತಿನ 18 ರಾಷ್ಟ್ರಗಳಲ್ಲಿ ಈಗಾಗಲೇ ರೂಪಾಯಿ ಮೂಲಕ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿತ್ತು.

Advertisement

ಪ್ರಸಕ್ತ ವಿತ್ತೀಯ ವರ್ಷದಲ್ಲಿ 765 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೌಲ್ಯದ ಸರಕು ಮತ್ತು ಸೇವೆಗಳು ರಫ್ತಾಗಿರುವ ಸಾಧ್ಯತೆ ಇದೆ. 2021-22ನೇ ಸಾಲಿನಲ್ಲಿ ಅದರ ಮೌಲ್ಯ 676 ಬಿಲಿಯನ್‌ ಅಮೆರಿಕನ್‌ ಡಾಲರ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next