ನವದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘಟನೆಯ ಮುಖಂಡರನ್ನು ಕೇಂದ್ರ ಸರ್ಕಾರ ಮಂಗಳವಾರ (ಡಿಸೆಂಬರ್ 1, 2020) ಮಾತುಕತೆ ಆಹ್ವಾನಿಸಿದ್ದು, ಯಾವುದೇ ಕಾರಣಕ್ಕೂ ನೂತನ ಕಾಯ್ದೆಯನ್ನು ಹಿಂಪಡೆಯಲ್ಲ ಎಂದು ಕೇಂದ್ರ ಸ್ಪಷ್ಟಪಡಿಸುವ ಮೂಲಕ ರೈತರು ಮತ್ತು ಕೇಂದ್ರದ ನಡುವಿನ ಹಗ್ಗಜಗ್ಗಾಟ ಮುಂದುವರಿದಂತಾಗಿದೆ.
ನೂತನ ಕಾಯ್ದೆಗೆ ಸಂಬಂಧಿಸಿದಂತೆ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಬಗ್ಗೆ ಕೇಂದ್ರ ಸರ್ಕಾರ ನೀಡಿದ್ದ ಆಫರ್ ಅನ್ನು ರೈತ ಮುಖಂಡರು ತಿರಸ್ಕರಿಸಿರುವುದಾಗಿ ಮೂಲಗಳು ತಿಳಿಸಿವೆ. ಸತತ ಮೂರು ಗಂಟೆಗಳಿಂದ ನಡೆಯುತ್ತಿದ್ದ ಮಾತುಕತೆ ಇನ್ನೂ ಮುಂದುವರಿದಿರುವುದಾಗಿ ವರದಿ ಹೇಳಿದೆ.
ಕೇಂದ್ರದ ನೂತನ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಕಳೆದ ಐದು ದಿನಗಳಿಂದ ಪಂಜಾಬ್ ಮತ್ತು ಹರ್ಯಾಣ ರೈತರು ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಏತನ್ಮಧ್ಯೆ ಷರತ್ತುಬದ್ಧ ಮಾತುಕತೆ ಆಹ್ವಾನವನ್ನು ರೈತರು ತಿರಸ್ಕರಿಸಿದ್ದರು.
ಇದನ್ನೂ ಓದಿ:ವಾಟ್ಸಾಪ್ ಹೇಗೆ ಹ್ಯಾಕ್ ಆಗುತ್ತದೆ ಗೊತ್ತಾ? ಏನಿದು ನಿಗೂಢ OTP ಸ್ಕ್ಯಾಮ್…
ಕೃಷಿ ಸಚಿವ ನರೇಂದ್ರ ಸಿಂಗ್ ಟೋಮರ್, ಪಿಯೂಸ್ ಗೋಯಲ್ ಹಾಗೂ ಸೋಮ್ ಪ್ರಕಾಶ್ ರೈತ ಸಂಘಟನೆಯ ಮುಖಂಡರ ಜತೆ ನೂತನ ಕಾಯ್ದೆ ಕುರಿತು ಮಾತುಕತೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.