ನವದೆಹಲಿ:ಸಾಮಾಜಿಕ ಜಾಲತಾಣಗಳಿಗೆ ನಿಯಂತ್ರಣ ಹೇರುವ ಪ್ರಸ್ತಾಪಿತ ಸೋಶಿಯಲ್ ಮೀಡಿಯಾ ಹಬ್ ಅಧಿಸೂಚನೆಯನ್ನು ಹಿಂಪಡೆಯುವುದಾಗಿ ಸುಪ್ರೀಂಕೋರ್ಟ್ ಗೆ ಶುಕ್ರವಾರ ಅಫಿಡವಿಟ್ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಯೂ ಟರ್ನ್ ಹೊಡೆದಿದೆ.
ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಕೇಂದ್ರದ ಪರ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಅಧಿಸೂಚನೆ ಹಿಂಪಡೆಯುವುದಾಗಿ ಅಫಿಡವಿಟ್ ಸಲ್ಲಿಸಿದರು. ಅಲ್ಲದೇ ಕೇಂದ್ರದ ಸೋಶಿಯಲ್ ಮೀಡಿಯಾ ಹಬ್ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಇತ್ಯರ್ಥಗೊಳಿಸಿದೆ.
ಸೋಶಿಯಲ್ ಮೀಡಿಯಾ ಹಬ್ ನೀತಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಪುನರ್ ವಿಮರ್ಶಿಸಲಿದೆ ಎಂದು ಸಿಜೆಐ ಮಿಶ್ರಾ, ಜಸ್ಟೀಸ್ ಎಎಂ ಖಾನ್ವಿಲ್ಕರ್ ಹಾಗೂ ಜ.ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠಕ್ಕೆ ಅಟಾರ್ನಿ ಜನರಲ್ ವೇಣುಗೋಪಾಲ್ ತಿಳಿಸಿದರು.
ಕೇಂದ್ರ ಸರ್ಕಾರದ ಸೋಶಿಯಲ್ ಮೀಡಿಯಾ ಹಬ್ ನೀತಿ, ಸಾಮಾಜಿಕ ಜಾಲತಾಣ ಉಪಯೋಗಿಸುತ್ತಿರುವವರ ಮೇಲೆ ನಿಗಾ ಇಡಲು ಬಳಸಿಕೊಳ್ಳುವ ಹುನ್ನಾರ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಶಾಸಕ ಮಾಹ್ವಾ ಮೊಯಿತ್ರಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಕೇಂದ್ರ ಸರ್ಕಾರ ಕಣ್ಗಾವಲು ರಾಷ್ಟ್ರ ಸೃಷ್ಟಿ ಮಾಡಲು ನೋಡುತ್ತಿದೆ ಎಂದು ಸೋಶಿಯಲ್ ಮೀಡಿಯಾ ಹಬ್ ರಚಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಪ್ರಸ್ತಾಪದ ಬಗ್ಗೆ ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿತ್ತು.