ಹೊಸದಿಲ್ಲಿ: ಕೇಂದ್ರ ಸರಕಾರದ ಉದ್ಯೋಗಿಗಳು ಪಡೆಯಬಹುದಾದ ಉಡುಗೊರೆಗಳ ಮೌಲ್ಯದ ಮಿತಿಯನ್ನು ಹೆಚ್ಚಿಸಲಾಗಿದೆ. ಈಗ ಎ ಮತ್ತು ಬಿ ವರ್ಗದ ಉದ್ಯೋಗಿಗಳು 5 ಸಾವಿರ ರೂ.ವರೆಗಿನ ಉಡುಗೊರೆಗಳನ್ನು ಸ್ವೀಕರಿಸಬಹುದಾಗಿದೆ. ಎಲ್ಲ ವರ್ಗದ ಉದ್ಯೋಗಿಗಳಿಗೂ, ಸ್ವೀಕರಿಸಬಹುದಾದ ಉಡುಗೊರೆಗಳ ಮೌಲ್ಯದ ಮಿತಿಯನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ.
ಈ ಹಿಂದೆ ಎ ಮತ್ತು ಬಿ ಶ್ರೇಣಿಯ ಉದ್ಯೋಗಿಗಳು ಗರಿಷ್ಠ 1500 ರೂ. ಮೌಲ್ಯದ ಉಡುಗೊರೆಗಳನ್ನು ಸ್ವೀಕರಿಸಬಹುದಾಗಿತ್ತು. ನಿಗದಿಗಿಂತ ಹೆಚ್ಚು ಮೌಲ್ಯದ ಉಡುಗೊರೆ ಸ್ವೀಕರಿಸಲು ಉನ್ನತ ಅಧಿಕಾರಿಗಳ ಅನುಮತಿ ಅಗತ್ಯವಿದೆ. ಇದೇ ರೀತಿ, ಸಿ ಗ್ರೂಪ್‌ನ ಉದ್ಯೋಗಿಗಳು 2 ಸಾವಿರ ರೂ.ವರೆಗಿನ ಉಡುಗೊರೆ ಪಡೆಯಬಹುದು. ಈ ಹಿಂದೆ ಇದರ ಮಿತಿ 500 ರೂ. ಆಗಿತ್ತು. ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗೆ ಇರುವ ನೀತಿಗಳಿಗೆ ಅನುಗುಣವಾಗಿ ಈ ನಿಯಮಗಳನ್ನು ಪರಿಷ್ಕರಿಸಲಾಗಿದೆ.
ಲಂಚವಲ್ಲ!: ಇಲ್ಲಿ ಉಡುಗೊರೆ ಎಂದರೆ ಲಂಚವಲ್ಲ. ಬದಲಿಗೆ ಸರಕಾರದ ಸೇವೆಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳು ಸರ್ಕಾರಿ ಉದ್ಯೋಗಿಗಳಿಗೆ ಉಚಿತ ಸಾರಿಗೆ, ಬೋರ್ಡಿಂಗ್ ಅಥವಾ ಲಾಡಿjಂಗ್ ಅಥವಾ ಇತರ ಅನುಕೂಲವನ್ನು ಒದಗಿಸಲು ಮಾಡುವ ವೆಚ್ಚವಾಗಿದೆ. ಆದರೆ ಊಟ ಇತರ ಸೇವೆ ಒದಗಿಸುವುದನ್ನು ಉಡು ಗೊರೆಯ ಪಟ್ಟಿಯಿಂದ ಹೊರಗಿಡಲಾಗಿದೆ.
ಅಲ್ಲದೆ, ಯಾರಿಂದಲೂ ಐಷಾರಾಮಿ ಸಾಮಗ್ರಿಗಳನ್ನು ಸ್ವೀಕರಿಸುವಂತಿಲ್ಲ ಅಥವಾ ಐಷಾರಾಮಿ ಆತಿಥ್ಯ ಸ್ವೀಕರಿಸುವಂತಿಲ್ಲ. ಪದೇಪದೇ ಉಡುಗೊರೆ ಸ್ವೀಕರಿಸುವಂತಿಲ್ಲ. ಉಡುಗೊರೆ ಎಂಬುದಕ್ಕೆ ಸರಕಾರ ನಿಖರ ವಿವರಣೆಯನ್ನು ನೀಡಿದ್ದು, ಲಂಚ ಎಂದು ಇವುಗಳನ್ನು ಪರಿಗಣಿಸಲಾಗುವುದಿಲ್ಲ. ಇದರ ವಿವರಗಳನ್ನು ಸರಕಾರಕ್ಕೆ ವರದಿ ಮಾಡುವುದು ಕಡ್ಡಾಯವಾಗಿದೆ.
ವಿದೇಶದಿಂದ ಹಣ ಸ್ವೀಕರಿಸುವಂತಿಲ್ಲ: ಈ ಹಿಂದೆ ವಿದೇಶಿ ಗಣ್ಯರಿಂದ 1 ಸಾವಿರ ರೂ. ಮೌಲ್ಯದ ಉಡುಗೊರೆಗಳನ್ನು ಸ್ವೀಕರಿಸಲು ಅನುಮತಿಸಲಾಗಿತ್ತು. ಆದರೆ ಈ ಹೊಸ ನಿಯಮದಲ್ಲಿ ಅದನ್ನು ತೆಗೆದುಹಾಕಲಾಗಿದ್ದು, ವಿದೇಶಿ ಗಣ್ಯರಿಂದ ಯಾವ ರೀತಿಯ ಉಡುಗೊರೆಗಳನ್ನೂ ಸರ್ಕಾರಿ ಅಧಿಕಾರಿಗಳು ಸ್ವೀಕರಿಸುವಂತಿಲ್ಲ.