ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರದ ಸುಗ್ರೀವಾಜ್ಞೆಯನ್ನು ವಿರೋಧಿಸಲು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಶನಿವಾರ ತಮ್ಮ ಬೆಂಬಲವನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೆಸಿಆರ್ ‘ಬಿಜೆಪಿಯೇತರ ಸರ್ಕಾರಗಳನ್ನು ಕಾರ್ಯನಿರ್ವಹಿಸಲು ಕೇಂದ್ರ ಬಿಡುತ್ತಿಲ್ಲ. ದೆಹಲಿಯಲ್ಲಿ ಎಎಪಿ ಅತ್ಯಂತ ಜನಪ್ರಿಯ ಪಕ್ಷವಾಗಿದೆ. ಮುನ್ಸಿಪಲ್ ಚುನಾವಣೆಯಲ್ಲಿ ಎಎಪಿ ಗೆದ್ದಿದೆ. ಬಿಜೆಪಿ ಅಡೆತಡೆಗಳನ್ನು ಹಾಕಿತು ಅಂತಿಮವಾಗಿ ದೆಹಲಿ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಯಿತು ಎಂದರು.
“ಅಧಿಕಾರಿಗಳು ದೆಹಲಿ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಬೇಕೇ ಹೊರತು ರಾಜ್ಯಪಾಲರ ಕೈಯಲ್ಲಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಸುಪ್ರೀಂ ತೀರ್ಪಿಗೆ ಗೌರವವಿಲ್ಲದಿದ್ದರೆ, ತುರ್ತು ಪರಿಸ್ಥಿತಿ ಹೇರಿದ ದಿನಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದರು.
ಸುಗ್ರೀವಾಜ್ಞೆಯನ್ನು ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ ಕೆಸಿಆರ್, “ನಾವೆಲ್ಲರೂ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತೇವೆ” ಎಂದರು.
ಏತನ್ಮಧ್ಯೆ, ಅರವಿಂದ್ ಕೇಜ್ರಿವಾಲ್, “ಇದು ದೆಹಲಿಗೆ ಮಾತ್ರವಲ್ಲ, ಇದು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದೆ” ಎಂದು ಹೇಳಿದರು.