ನವದೆಹಲಿ: ಕೇಂದ್ರ ಸರ್ಕಾರ ನೂತನ ಮೂರು ಕಾಯ್ದೆಗಳನ್ನು ರದ್ದುಗೊಳಿಸಲೇಬೇಕು. ಅಲ್ಲದೇ ಎಂಎಸ್ ಪಿ (ಕನಿಷ್ಠ ಬೆಂಬಲ ಬೆಲೆ) ಬಗ್ಗೆ ಕಾನೂನು ಪ್ರಕಾರ ಭರವಸೆ ನೀಡಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಕೇಂದ್ರದ ಜತೆಗಿನ ಒಂಬನೇ ಸುತ್ತಿನ ಮಾತುಕತೆ ಆರಂಭಕ್ಕೂ ಮುನ್ನ ತಿಳಿಸಿದೆ.
ಕೇಂದ್ರ ಸರ್ಕಾರ ಕೂಡಲೇ ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕಾದ ಅಗತ್ಯವಿದ ಮತ್ತು ಎಂಎಸ್ ಪಿ ಕುರಿತು ಕಾನೂನುಬದ್ಧವಾಗಿ ಭರವಸೆ ನೀಡಬೇಕು ಎಂದು ಬಿಕೆಯು ವಕ್ತಾರ ರಾಕೇಶ್ ಟಿಕಾಯ್ಟ್ ತಿಳಿಸಿದ್ದಾರೆ.
ಮೂರು ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಈ ಮೊದಲು ನಡೆದ ಎಂಟು ಸುತ್ತಿನ ಮಾತುಕತೆಯಂತೆ ಕೇಂದ್ರ ಸರ್ಕಾರ ಹಠವನ್ನು ಮುಂದುವರಿಸಿದರೆ ಸಭೆಯಯಿಂದ ಎದ್ದು ಹೊರನಡೆಯುವುದಾಗಿ ಬಿಕೆಯು ಎಚ್ಚರಿಕೆ ನೀಡಿದೆ.
ಸುಪ್ರೀಂಕೋರ್ಟ್ ಒಂದು ವೇಳೆ ಆದೇಶ ನೀಡಿದಲ್ಲಿ ಜನವರಿ 26ರ ಗಣರಾಜ್ಯೋತ್ಸವ ದಿನದಂದು ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ರಾಲಿಯನ್ನು ರೈತರು ಹಿಂಪಡೆಯಲು ಸಿದ್ದರಿದ್ದಾರೆ ಎಂದು ಟಿಕಾಯ್ಟ್ ತಿಳಿಸಿದ್ದಾರೆ.
ನೂತನ ಕೃಷಿ ಕಾಯ್ದೆ ಕುರಿತಂತೆ ಕೇಂದ್ರ ಸರ್ಕಾರ ನಡೆಸಲು ಉದ್ದೇಶಿಸಿದ್ದ 9ನೇ ಸುತ್ತಿನ ಮಾತುಕತೆ ಆರಂಭಗೊಂಡಿದ್ದು, ಕೇಂದ್ರ ಸಚಿವ ನರೇಂದ್ರ ತೋಮರ್, ಪಿಯೂಷ್ ಗೋಯಲ್ ಮತ್ತು ರೈತ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.