Advertisement

ತ್ರಿವಳಿ ತಲಾಖ್‌: ಪತಿಗೆ ಸಿಗಲಿದೆ ಜಾಮೀನು

06:00 AM Aug 10, 2018 | |

ಹೊಸದಿಲ್ಲಿ: ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್‌ನಿಂದ ರಕ್ಷಿಸುವ ಸಂಬಂಧ ಇರುವ ವಿಧೇಯಕದಲ್ಲಿ ಕೇಂದ್ರ ಸರ್ಕಾರ ಕೊಂಚ ಬದಲಾವಣೆ ಮಾಡಿದೆ. ಇದುವರೆಗೆ ಮುಸ್ಲಿಂ ಮಹಿಳೆಗೆ ತಲಾಖ್‌ ನೀಡಿದ ವ್ಯಕ್ತಿಗೆ ಜಾಮೀನು ನೀಡಲು ಅವಕಾಶ ಇರಲಿಲ್ಲ. ಇನ್ನು ಮುಂದೆ ಜಾಮೀನಿಗೆ ಅವಕಾಶ ಉಂಟು.

Advertisement

ಗುರುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ವಿಧೇಯಕಕ್ಕೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಒಟ್ಟು 3 ತಿದ್ದುಪಡಿಗಳಿಗೆ ಸಂಪುಟ ಸಮ್ಮತಿಸಿದೆ. ಲೋಕಸಭೆಯಲ್ಲಿ ಈಗಾಗಲೇ ಹಾಲಿ ಮಸೂದೆ ಅಂಗೀಕಾರವಾಗಿದೆ. ಆದರೆ ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಇನ್ನೂ ಬಾಕಿ ಇದೆ. ತಲಾಖ್‌ ನೀಡಿದ ವ್ಯಕ್ತಿಗೆ ಜಾಮೀನು ನೀಡದೇ ಇರುವ ಪ್ರಸ್ತಾಪಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಮುಂಗಾರು ಅಧಿವೇಶನದ ಕೊನೆಯ ದಿನವಾಗಿರುವ ಶುಕ್ರವಾರ ಹೊಸ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯುವ ಇರಾದೆ ಸರ್ಕಾರದ್ದು.

ಕೋರ್ಟಲ್ಲಿ ಪತ್ನಿಯ ವಾದ ಆಲಿಸಿದ ಬಳಿಕ ಜಾಮೀನು ನೀಡುವ ಬಗ್ಗೆ ಜಡ್ಜ್ ಅಂತಿಮ ತೀರ್ಮಾನ ಕೈಗೊಳ್ಳಬಹುದು. ಜತೆಗೆ ಪರಿಹಾರ ನೀಡಲು ಪತಿ ಒಪ್ಪಿದರೆ ಜಾಮೀನು ಕೊಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಜತೆಗೆ, ಪತಿಯು ರಾಜಿ ಸಂಧಾನಕ್ಕೆ ಒಪ್ಪಿದರೆ ಆತನ ವಿರುದ್ಧ ಸಲ್ಲಿಸಲಾಗಿರುವ ದೂರು ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಕಡಿಮೆ ದರದಲ್ಲಿ ಧಾನ್ಯ
ಕೇಂದ್ರ ಸರ್ಕಾರ ತನ್ನ ಬಳಿ ಇರುವ 35 ಲಕ್ಷ ಟನ್‌ ಹೆಚ್ಚವರಿ ಧಾನ್ಯಗಳನ್ನು ಸಗಟು ಬೆಲೆಗಿಂತ ಕಡಿಮೆ ದರದಲ್ಲಿ (ಕಿಲೋಗೆ 15 ರೂ.) ರಿಯಾಯ್ತಿಯಲ್ಲಿ ರಾಜ್ಯಗಳಿಗೆ ಪಡಿತರಕ್ಕಾಗಿ ಹಂಚಲು ನಿರ್ಧರಿಸಿದೆ. ಇದರಿಂದ ಸರ್ಕಾರಕ್ಕೆ 5237 ಕೋಟಿ ರೂ. ಹೊರೆಯಾಗಲಿದೆ. ಇದೇ ವೇಳೆ, 10ನೇ ತರಗತಿ ನಂತರದ ಒಬಿಸಿ ವಿದ್ಯಾರ್ಥಿವೇತನ ಮುಂದುವರಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next