ನವದೆಹಲಿ: ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ ಎಫ್ ಜೆ) ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿರುವ ವಿದೇಶಿ ಮೂಲದ ಪಂಜಾಬ್ ಪಾಲಿಟಿಕ್ಸ್ ಟಿವಿಯ ಆ್ಯಪ್ಸ್, ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿರ್ಬಂಧಿಸಲು ಆದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ (ಫೆ.22) ತಿಳಿಸಿದೆ.
ಇದನ್ನೂ ಓದಿ:ಮಾತಿನ ಮಲ್ಲಿ ಆರ್ ಜೆ ರಚನಾ ಹೃದಯಾಘಾತದಿಂದ ನಿಧನ
ವಿದೇಶಿ ಮೂಲದ ಚಾನೆಲ್, ಪಂಜಾಬ್ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಉಪಯೋಗಿಸಿಕೊಂಡು ಸಾರ್ವಜನಿಕ ಶಾಂತಿ ಕದಡಲು ಯತ್ನಿಸುತ್ತಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸಚಿವಾಲಯ ವಿಶೇಷ ಅಧಿಕಾರ ಬಳಸಿಕೊಂಡು ಪಂಜಾಬ್ ಪಾಲಿಟಿಕ್ಸ್ ಟಿವಿಯ ಡಿಜಿಟಲ್ ಮಾಧ್ಯಮಗಳ ಮೂಲಗಳನ್ನು ನಿರ್ಬಂಧಿಸಿರುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳು ತಿಳಿಸಿವೆ.
ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಮತ್ತು ಪ್ರತ್ಯೇಕತಾದ ಬಿಂಬಿಸುವ ಮಾಹಿತಿಯನ್ನು ಹಂಚುಕೊಳ್ಳುತ್ತಿರುವುದು ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ಆ್ಯಪ್ಸ್, ವೆಬ್ ಸೈಟ್ಸ್ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ವಿವರಿಸಿದೆ.
ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವುದಾಗಿ ಖಲಿಸ್ತಾನ್ ಪರ ಸಂಘಟನೆಯ ಪತ್ರದ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು.