Advertisement

ಕೇಂದ್ರೀಯ ವಿವಿ ಕುಲಪತಿ ಹುದ್ದೆ 10 ತಿಂಗಳಿಂದ ಖಾಲಿ

06:03 PM Mar 02, 2021 | Team Udayavani |

ಕಲಬುರಗಿ: ರಾಜ್ಯದ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಹುದ್ದೆ ಕಳೆದ ಹತ್ತು ತಿಂಗಳಿನಿಂದ ಖಾಲಿ ಬಿದ್ದಿದೆ. ಪ್ರೊ|ಎಚ್‌. ಎಂ. ಮಹೇಶ್ವರಯ್ಯ ಕುಲಪತಿ ಹುದ್ದೆಯಿಂದ ಕಳೆದ ಏಪ್ರಿಲ್‌ ತಿಂಗಳಲ್ಲಿ ನಿವೃತ್ತಿಯಾಗಿದ್ದು, ಕೋವಿಡ್‌ ಹಿನ್ನೆಲೆಯಲ್ಲಿ ಮೂರು ತಿಂಗಳು ಸೇವೆ ವಿಸ್ತರಿಸಲಾಗಿತ್ತು. ನಂತರ ಪ್ರೊ|ಅಳಗವಾಡಿ ಪ್ರಭಾರಿ ಕುಲಪತಿಗಳಾಗಿದ್ದಾರೆ. ಕಾಯಂ ಕುಲಪತಿ ಇರದಿದ್ದಕ್ಕೆ ಶೈಕ್ಷಣಿಕವಾಗಿ ಹಿನ್ನಡೆಯಾಗಿದೆ.

Advertisement

ಹೊಸ ಕೋರ್ಸ್‌ ಪ್ರಾರಂಭದ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಬೇಕಿದೆ. ಮುಂದಿನ 2021-22 ಶೈಕ್ಷಣಿಕ ವರ್ಷದ ಅಕಾಡೆಮಿಕ್‌ ಚಟುವಟಿಕೆಗಳಿಗೆ ಸಂಬಂಧಿ ಸಿದಂತೆ ಅಧಿ ಸೂಚನೆ ಹೊರಡಿಸಬೇಕಿದೆ. ಕಾಯಂ ಕುಲಪತಿ ಇಕ್ಕದ್ದಕ್ಕೆ ಯಾವುದೇ ಕಾರ್ಯಗಳಾಗುತ್ತಿಲ್ಲ. ಹೊಸ ಶಿಕ್ಷಣ ನೀತಿ ನೇಮಕಾತಿ-2020 ಅನುಷ್ಠಾನಗೊಳಿಸುವಲ್ಲಿ ಕೇಂದ್ರೀಯ ವಿವಿಯೇ ಪ್ರಮುಖ ಪಾತ್ರ ವಹಿಸಬೇಕಿದೆ. ಈ ನಿಟ್ಟಿನಲ್ಲಿ ವಿಚಾರ ಸಂಕಿರಣ, ಸಭೆಗಳಾಗಬೇಕಿದೆ. ನೇಮಕಾತಿ ನಡೆಯಬೇಕಿದೆ. ಕಾಯಂ ಕುಲಪತಿ ಇದ್ದರೆ ಮಾತ್ರ ನಿರ್ಧಾರ ಕೈಗೊಳ್ಳಬಹುದಾಗಿದೆ.

ಒಂದು ದಿನದ ವಿಸಿ: ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಕುಲಪತಿ ಹುದ್ದೆಯಿಂದ ಬಿಡುಗಡೆ ಹೊಂದಿದ ನಂತರ ಪ್ರೊ|ಎನ್‌. ನಾಗರಾಜು 13 ದಿನಗಳ ಕಾಲ ಪ್ರಭಾರಿ ವಿಸಿಯಾಗಿ ಕಾರ್ಯನಿರ್ವಹಿಸಿದರೆ ರೊಮ್ಯಾಟ್‌ ಜಾನ್‌ ಎನ್ನುವರು ಒಂದು ದಿನ ವಿಸಿಯಾಗಿ ಕಾರ್ಯನಿರ್ವಹಿಸಿದರು. ನಂತರ ಪ್ರೊ| ಎಂ.ವಿ. ಅಳಗವಾಡಿ ಪ್ರಭಾರಿ ವಿಸಿಯಾಗಿ ಕಾರ್ಯಭಾರ ವಹಿಸಿಕೊಂಡು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ವಿವಿ ವಾರ್ಷಿಕ ಘಟಿಕೋತ್ಸವ ಸಹ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಸಬೇಕು. ಆದರೆ ಕಾಯಂ ಕುಲಪತಿಗಳಿಲ್ಲದಿದ್ದಕ್ಕೆ ನಿರ್ಧಾರ ತೆಗೆದುಕೊಳ್ಳಲಿಕ್ಕಾಗುತ್ತಿಲ್ಲ.

ಕುಲಸಚಿವ ಸ್ಥಾನಕ್ಕೆ ನಡೆದಿತ್ತು ಕಿತ್ತಾಟ
ವಿವಿಗೆ ಕಾಯಂ ಕುಲಪತಿ ಇರದೇ ಪ್ರಭಾರಿ ವಿಸಿ ಇರುವ ಕಾರಣದಿಂದಲೇ ಪ್ರಭಾರಿ ಕುಲಪತಿ ಹಾಗೂ ಕುಲಸಚಿವರ ನಡುವೆ ಕಿತ್ತಾಟ ಕೂಡ ನಡೆದಿತ್ತು. ಪ್ರಭಾರಿ ಕುಲಪತಿಗಳು ಮುಷ್ತಾಕ್‌ ಅಹ್ಮದ ಐ ಪಟೇಲ್‌ ಅವರನ್ನು ಕುಲಸಚಿವ ಹುದ್ದೆಯಿಂದ ಬಿಡುಗಡೆಗೊಳಿಸಿ ಬಸವರಾಜ ಡೋಣೂರ ಅವರನ್ನು ಕುಲಸಚಿವರನ್ನಾಗಿ ನೇಮಿಸಿದ್ದರು. ಡೋಣೂರ ಅವರಿಗೆ ಅಧಿಕಾರ ಹಸ್ತಾಂತರಕ್ಕೆ ಪಟೇಲ್‌ ನಿರಾಕರಿಸಿದ್ದರು. ಐದು ವರ್ಷದ ಅವಧಿ ಇದ್ದರೂ ಕಾನೂನು ಬಾಹಿರವಾಗಿ ಎರಡು ವರ್ಷಕ್ಕೆ ಅಧಿಕಾರ ಕಡಿತಗೊಳಿಸಿರುವುದು ಸರಿಯಲ್ಲ ಎಂದು ಬಲವಾಗಿ ಆಕ್ಷೇಪಿಸಿದ್ದರು. ಕುರ್ಚಿಗಾಗಿ ಇಬ್ಬರ ನಡುವೆ ಕಿತ್ತಾಟ ನಡೆದಿತ್ತು. ಕಾಯಂ ಕುಲಪತಿಗಳಿದ್ದರೆ ಇದ್ಯಾವುದಕ್ಕೂ ಆಸ್ಪದವಿರುತ್ತಿರಲಿಲ್ಲ.

*ಹಣಮಂತರಾವ ಭೈರಾಮಡಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next