Advertisement
ಸದನದಲ್ಲಿ ನಿರ್ಣಯ ಮಂಡನೆಯಾಗುತ್ತಿದ್ದರೂ ತಡವಾಗಿ ಎಚ್ಚೆತ್ತುಕೊಂಡ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ರಾಜ್ಯ ಸರಕಾರದ ನಿರ್ಣಯದ ವಿರುದ್ಧ ಧರಣಿ ನಡೆಸಿದರು. ಧರಣಿ ನಡುವೆಯೇ ಎರಡೂ ನಿರ್ಣಯಗಳನ್ನು ಅನುಮೋದಿಸಿ ಕಲಾಪ ವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ಗುರುವಾರ ಸಂಜೆ ಕಾಂಗ್ರೆಸ್‌ನ ಪ್ರಕಾಶ್ ಕೋಳಿವಾಡ ಅವರು ಕರ್ನಾಟಕ ಮೋಡ ಬಿತ್ತನೆ ಮಸೂದೆ-2024ನ್ನು ಮಂಡಿಸುತ್ತಿದ್ದರು. ವಿಪಕ್ಷಗಳಿಗೆ ಖಾಸಗಿ ಮಸೂದೆಯ ಪ್ರತಿಯನ್ನೇ ನೀಡಿಲ್ಲ ಎಂದು ಗದ್ದಲ ಸೃಷ್ಟಿಯಾಗುತ್ತಿದ್ದಂತೆ ಎಲ್ಲರಿಗೂ ಪ್ರತಿಯನ್ನು ವಿತರಣೆ ಮಾಡಲಾಗುತ್ತಿತ್ತು. ತತ್‌ಕ್ಷಣ ಎದ್ದುನಿಂತ ಕಾನೂನು ಸಚಿವ ಎಚ್.ಕೆ. ಪಾಟೀಲ್ ಕೇಂದ್ರದ ವಿರುದ್ಧ ಮೊದಲ ನಿರ್ಣಯವನ್ನು ಓದಲು ಆರಂಭಿಸಿದರು. ಇದರ ಪರಿವೆಯೇ ಇಲ್ಲದ ವಿಪಕ್ಷ ಸದಸ್ಯರು ಖಾಸಗಿ ಮಸೂದೆಯ ಅಂಶಗಳ ಅಧ್ಯಯನದಲ್ಲಿ ತೊಡಗಿದ್ದರು.
ಅಷ್ಟರಲ್ಲಾಗಲೇ ನಿರ್ಣಯದ ಅರ್ಧಭಾಗವನ್ನು ಸಚಿವ ಪಾಟೀಲ್ ಓದಿ ಆಗಿತ್ತು. ತತ್‌ಕ್ಷಣ ಬಿಜೆಪಿಯ ಯತ್ನಾಳ್ ತಮ್ಮವರನ್ನು ಎಚ್ಚರಿಸಿದರು. ಅನಂತರ ಪ್ರಶ್ನಿಸಲು ಮುಂದಾದ ವಿಪಕ್ಷ ನಾಯಕ ಆರ್. ಅಶೋಕ್, ಸದಸ್ಯರಾದ ಸುನಿಲ್ ಕುಮಾರ್, ಎಸ್. ಸುರೇಶಕುಮಾರ್ ರಾಜ್ಯ ಸರಕಾರದ ನಿರ್ಣಯದ ವಿರುದ್ಧ ಪ್ರಶ್ನೆಗಳ ಸುರಿಮಳೆಗರೆದರು. ಬಾವಿಗೆ ಬಂದು ಧರಣಿ ಆರಂಭಿಸಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
Related Articles
ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಇಂಥ ದ್ದೊಂದು ನಿರ್ಣಯ ಕೈಗೊಳ್ಳುವ ಬಗ್ಗೆ ಚರ್ಚಿಸಿಲ್ಲ, ಕಲಾಪದ ಕಾರ್ಯಸೂಚಿ ಪಟ್ಟಿಯಲ್ಲೂ ಇದನ್ನು ಸೇರಿಸಿಲ್ಲ. ಏಕಾಏಕಿ ನಿರ್ಣಯ ಮಂಡಿಸಿದರೆ ಹೇಗೆ? ಕೇಂದ್ರ ಸರಕಾರವನ್ನು ಬಜೆಟ್‌ನಲ್ಲಿ ಬೈದದ್ದು ಸಾಲದೇ? ಇದೆಂಥ ದುರಾಡಳಿತ ಎಂದರಲ್ಲದೆ ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಎಂದು ಕೂಗಲಾರಂಭಿಸಿದರು. ವಿಪಕ್ಷಗಳ ಧರಣಿ ನಡುವೆಯೇ ಎರಡೂ ನಿರ್ಣಯಕ್ಕೆ ಅನುಮೋದನೆ ನೀಡಲಾಯಿತು. ಗದ್ದಲ ಏರ್ಪಟ್ಟಿದ್ದರಿಂದ 10 ನಿಮಿಷ ಕಲಾಪ ಮುಂದೂಡಿದ ಸ್ಪೀಕರ್ ಖಾದರ್ ಸಂಧಾನ ಸಭೆ ನಡೆಸಿದರು. ಅಲ್ಲಿಯೂ ಸ್ಪೀಕರ್ ಮತ್ತು ಸರಕಾರದ ಕ್ರಮಕ್ಕೆ ವಿಪಕ್ಷಗಳ ಪ್ರಮುಖ ನಾಯಕರು ವಿರೋಧ ವ್ಯಕ್ತಪಡಿಸಿದರು. ಪುನಃ ಸಮಾವೇಶಗೊಂಡ ಕಲಾಪದಲ್ಲಿ ಬಿಜೆಪಿ ಶಾಸಕರು ಭಾಗಿಯಾಗಿರಲಿಲ್ಲ. ಇದೇ ಕಾರಣ ಕೊಟ್ಟು ಶುಕ್ರವಾರಕ್ಕೆ ಕಲಾಪವನ್ನು ಮುಂದೂಡಲಾಯಿತು.
Advertisement
ನಿರ್ಣಯಗಳ ಸಾರಾಂಶವೇನು?ಕೇಂದ್ರ ಬಿಜೆಪಿ ಸರಕಾರದ 10 ವರ್ಷಗಳ ಆಡಳಿತದಲ್ಲಿ ರಾಜ್ಯಕ್ಕೆ ಅನ್ಯಾಯ.
2017-18ರಿಂದ 1.87 ಲಕ್ಷ ಕೋಟಿ ರೂ. ರಾಜ್ಯ ಸರಕಾರಕ್ಕೆ ನಷ್ಟ.
ಆರ್ಥಿಕ ಸಂಪನ್ಮೂಲ ತಾರತಮ್ಯ ರಹಿತವಾಗಿ, ಸಮಾನವಾಗಿ ಹಂಚಿಕೆ ಆಗಬೇಕು.
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧವಾಗಿ ನಿಗದಿಯಾಗಬೇಕು.
ರೈತರೊಂದಿಗೆ ಸಂಘರ್ಷ ನಡೆಸದೆ ನ್ಯಾಯ ಯುತ ವಾಗಿ ಕೇಂದ್ರ ನಡೆದುಕೊಳ್ಳಬೇಕು. ಕರ್ನಾಟಕ, ಕನ್ನಡಿಗರು, ರೈತರಿಗೆ ಅನ್ಯಾಯ ಮಾಡಬೇಕೆಂದೇ ಬಿಜೆಪಿಯವರು ಹುಟ್ಟಿದ್ದೀರಿ. ಕರ್ನಾಟಕ ಹಾಗೂ ರೈತರ ಹಿತವನ್ನೇ ವಿರೋಧಿಸುತ್ತಿದ್ದೀರಿ. ಕನಿಷ್ಠ ಬೆಂಬಲ ಬೆಲೆಗೆ ಬೇಡಿಕೆ ಇರಿಸಿದ ರೈತರನ್ನು ಗುಂಡಿಟ್ಟು ಕೊಲ್ಲಲಾಗುತ್ತಿದೆ. ರೈತರ ಶವದ ಮೇಲೆ ಕೇಂದ್ರ ಸರಕಾರದವರು ಆಡಳಿತ ಮಾಡುತ್ತಿದ್ದಾರೆ.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ ಕೇಂದ್ರ ಸರಕಾರದ ಮೇಲೆ ಪದೇಪದೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವ ರಾಜ್ಯ ಸರಕಾರವು ಕಾರ್ಕೋಟಕ ವಿಷಕಾರುವ ವಿಷಜಂತುವಿನಂತಾಗಿದೆ. ಆಡಳಿತ ಮಾಡಲು ಯೋಗ್ಯತೆ ಇಲ್ಲದ ಮೇಲೆ ಬಿಟ್ಟಿಳಿಯಿರಿ. ಕದ್ದುಮುಚ್ಚಿ ನಿರ್ಣಯ ತಂದ ಹೇಡಿಗಳು. ನಾಚಿಕೆ ಆಗಬೇಕು. ಇದೊಂದು ನಾಲಾಯಕ್ ಸರಕಾರ. ತಾಕತ್ತಿದ್ದರೆ ಕಲಾಪ ಕಾರ್ಯಸೂಚಿ ಪಟ್ಟಿಯಲ್ಲಿ ನಿರ್ಣಯದ ಬಗ್ಗೆ ಉಲ್ಲೇಖಿಸಬೇಕಿತ್ತು.
– ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ