ಡಿಗ್ರಿಯ ಸೆಮಿಸ್ಟರ್ ಪರೀಕ್ಷೆ ಬಗ್ಗೆ ಹೇಳಬೇಕೇ? ಒಂದು ತಿಂಗಳ ದೀರ್ಘಾವಧಿಯವರೆಗೂ ಅದು ನಡೆಯುತ್ತಲೇ ಇರುತ್ತದೆ. ಒಂದೇ ಸಮನೆ ಪದವಿ ಪರೀಕ್ಷೆಯ ಬಗ್ಗೆ ಯಾಕೆ ಹೇಳಿದೆ ಎಂದರೆ, ತಿಂಗಳವರೆಗೆ ನಡೆಯುವ ಈ ಪರೀಕ್ಷೆಗಳನ್ನು ಬದಿಗೊತ್ತಿಟ್ಟು ಸ್ವಲ್ಪ ಮೈಂಡ್ ರಿಲೀಫ್ ಮಾಡಿಕೊಳ್ಳಲು ಮೇ 10ರಂದು ನಾವು ಪ್ರವಾಸಕ್ಕೆ ಹೋದೆವು. “ಪ್ರವಾಸ’ ಅನ್ನೋದಕ್ಕಿಂತ ಅದನ್ನು ಕ್ಯಾಂಪ್ ಅಂದರೆ ಉತ್ತಮವೋ ಏನೋ. ಕುತ್ತಾರು ಬಾಲಸಂರಕ್ಷಣಾ ಆಶ್ರಮದಿಂದ ನಮ್ಮ ಪ್ರಯಾಣ ಆರಂಭವಾಯಿತು. ಹೋದದ್ದೆಲ್ಲಿಗೆ ಅಂತೀರಾ? ನಮ್ಮ ಸೌಂದರ್ಯ ಸ್ವರ್ಗ ಮಡಿಕೇರಿಗೆೆ. ಎರಡು ದಿವಸದ ಪ್ರವಾಸ ಎನ್ನುವಾಗ ಮಾತ್ರ ನಾವು ಬಸ್ಸಿನಲ್ಲಿ ತಿನ್ನಲು ಬಾಳೆಹಣ್ಣಿನ ಗೊನೆ, ಬ್ರೆಡ್, ಕಿತ್ತಳೆಹಣ್ಣು , ಮಾವಿನಕಾಯಿ ಎಲ್ಲವನ್ನೂ ತಯಾರಿ ಮಾಡಿಕೊಂಡಿದ್ದೆವು. ಹಾಗೆ ಪ್ರಯಾಣ ಆರಂಭವಾಗುತ್ತಿದ್ದಂತೆ ನಾವೆಲ್ಲ ಬಸ್ಸಿನಲ್ಲಿ ಕುಣಿಯಲು ಶುರು ಮಾಡಿದೆವು. ಸರಿಗಮ ಹಾಡಿ ಆಟ ಪ್ರಾರಂಭ ಮಾಡಿದೆವು. ಬಸ್ಸಿನಲ್ಲಿ ಮಲಗಿ ನಿದ್ರಾಲೋಕಕ್ಕೆ ಹೋದವರ ಮೂತಿಯ ಝೂಮ್ ಮಾಡಿ ಫೋಟೋ ತೆಗೆದು ಸ್ಟೇಟಸ್ ಹಾಕುವುದು ಎಂದರೆ, ಅದರಲ್ಲಿನ ಮಜಾವೇ ಬೇರೆ! ಹಾಗೆ ನಾವು ಮಧ್ಯಾಹ್ನ 2.30ಕ್ಕೆ ಹೊರಟು ರಾತ್ರಿ 9ರ ವೇಳೆಗೆ ಟಿ. ಶೆಟ್ಟಿಗೇರಿ, ಬಿರುನಾಣಿ ಎಂಬ ಊರನ್ನು ತಲುಪಿದ್ದೆವು.
ಪ್ರತಿದಿನ ಕೇವಲ ಕಟ್ಟಡ, ಕಾರ್ಖಾನೆಗಳು, ಅಪಾರ್ಟ್ ಮೆಂಟ್ಸ್, ಸಾಲುಗಟ್ಟಿ ನಿಂತಿರೋ ವಾಹನ, ಕರ್ಕಶ ಶಬ್ದ ಜಂಜಾಟದ ಜೀವನವನ್ನೇ ನೋಡುತ್ತ ಬೆಳೆಯುತ್ತಿರುವ ನಾವುಗಳು ಆ ಜಾಗ ನೋಡಿ ಮೂಕವಿಸ್ಮಿತರಾದದ್ದು ಮಾತ್ರ ಸುಳ್ಳಲ್ಲ. ಎಲ್ಲೋ ಒಂದು ಕಡೆ ಬೆತ್ತಲೆ ಪ್ರದೇಶದಲ್ಲಿ ವಾಸಿಸುವ ನಮ್ಮನ್ನು ಪ್ರಕೃತಿಮಾತೆ ತನ್ನ ವಿಸ್ತಾರವಾದ ಸೆರಗಲ್ಲಿ ಭದ್ರವಾಗಿ ಹಿಡಿದುಕೊಂಡಿದ್ದಾಳ್ಳೋ ಎಂದು ಭಾಸವಾಗುತ್ತಿತ್ತು. ಹೌದು, ನಾವು ಹೋದದ್ದು ವೋಟ್‌ಕಾಡ್ ನೇಚರ್ ಎನ್ನುವ ಕ್ಯಾಂಪ್‌ಗೆ. ಅಲ್ಲಿಗೆ ರಾತ್ರಿ 9 ಗಂಟೆಗೆ ತಲುಪಿದ ನಂತರ ಅಲ್ಲಿಯ ನಿರ್ದೇಶಕರು ಆ ಸ್ಥಳದ ಪರಿಚಯ ಮಾಡಿಕೊಟ್ಟರು. ಹಾಗೆ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಫ್ರೆಶ್‌ಅಪ್ ಆಗಿ ರಾತ್ರಿಯ ಭೋಜನ ಮಾಡಿದೆವು. ಆಹಾರ ಸೇವಿಸಿದ ನಂತರ ಮಲಗಲು ಮಾಡಿಟ್ಟಿದ್ದ ಜೋಪಡಿಗೆ ತುಂಬಾ ಅನುಕೂಲಕರವಾಗಿತ್ತು. ಅದರ ಒಳಗಿದ ಬೆಚ್ಚಗಿನ ಅನುಭವ ಸುಖ ನಿದ್ರೆಗೆ ಜಾರಿಸಿತು. ಮರುದಿನ ನಾವೆಲ್ಲ ಬೆಳಿಗ್ಗೆ ನಿತ್ಯಕರ್ಮ ಮುಗಿಸಿ ಉಪಹಾರ ಆದ ಮೇಲೆ ಪ್ರಯಾಣ ಮುಂದುವರಿಸಿದೆವು.
ಪ್ರಯಾಣ ಮುಂದುವರಿಸಿದ್ದು “ಲಕ್ಷ್ಮಣ ತೀರ್ಥ ಇಪ್ರ ಜಲಪಾತ’ ಇರುವ ತಾಣಕ್ಕೆ. ಪ್ರಯಾಣದುದ್ದಕ್ಕೂ ಸಿಕ್ಕಿದ ಕಾಫಿ, ಟೀಗೆ ಬೆಳೆಯುವ ಬೆಳಗಾರರಿಗೆ ಒಂದು ಸಣ್ಣ ನಗು ಬೀರುತ್ತಾ, ಬಸ್ಸಿನ ಕಿಟಕಿಯಿಂದ ಹೊರಗೆ ಕೈಹಾಕಿ “ಹಾಯ್’ ಎನ್ನುತ್ತಾ, ನಾವು ಜಲಪಾತ ತಾಣ ಮುಟ್ಟಿದೆವು. ತೂಗು ಸೇತುವೆಯಲ್ಲಿ ನಡೆಯುತ್ತಾ, ಮೆಟ್ಟಿಲೇರುತ್ತಾ, ಅಲ್ಲಲ್ಲಿ ಒಂದೊಂದು ಸೆಲ್ಫಿ ತೆಗೆಯುತ್ತ, ನೀರಿನ ಭೋರ್ಗರೆತಕ್ಕೆ ಜೋರಾಗಿ ಕಿರುಚಾಡಿ, ಕುಣಿದು, ನೀರಿನ ಬಣ್ಣವನ್ನೇ ಬದಲಾಯಿಸಿ ಕುಣಿದು ಕುಪ್ಪಳಿಸಿದೆವು. ಅಲ್ಲಿಂದ ಮತ್ತೆ ಹಿಂತಿರುಗಿ ನಮ್ಮ ಟೆಂಟ್‌ಗೆ ಬಂದಾಗ ಮಧ್ಯಾಹ್ನ ಭೋಜನ ಸಿದ್ಧವಿತ್ತು. ಊಟದ ನಂತರ ವಿಶ್ರಾಂತಿ ತೆಗೆದುಕೊಳ್ಳುವಾಗ ಮತ್ತೆ ಜೋರು ಮಳೆಯಾಯಿತು. ಮಾವಿನಕಾಯಿ ನೆನಪಾಗಿ ಮೆಣಸಿನಹುಡಿ ಸವರಿ ಬಾಯಿ ಚಪ್ಪರಿಸುತ್ತಿದ್ದಾಗ ಹೊರಗಿನ ಪ್ರಪಂಚವನ್ನೇ ಕ್ಷಣಹೊತ್ತು ಮರೆತುಬಿಟ್ಟಿದ್ದೆವು. ಆ ದಿನದ ರಾತ್ರಿಯ ಫೈಯರ್ ಡ್ಯಾನ್ಸ್ ಮಾತ್ರ ವರ್ಣಿಸಿದಷ್ಟು ಮುಗಿಯದು. ಮುಂಜಾನೆ 6.30ಕ್ಕೆ ಟ್ರೆಕ್ಕಿಂಗ್‌ಗೆ ಅಂತ ಅಲ್ಲಿಯ ನಿರ್ದೇಶಕರು ಕರೆದುಕೊಂಡು ಹೋದಾಗ ಭಾರೀ ಜೋಶ್‌ನಲ್ಲಿ ಹೊರಟೆವು. “ಪ್ರಾಣಿಗಳಿವೆ, ಮನುಷ್ಯರ ವಾಸನೆ ಸಿಕ್ಕಿದರೆ ಹುಡುಕಿಕೊಂಡು ಬರುತ್ತವೆ, ನಿಶ್ಶಬ್ದವಾಗಿರಿ’ ಅಂದಾಗ ಜೀವ ಕೈಯಲ್ಲಿ ಹಿಡಿದು ಅವರನ್ನು ಹಿಂಬಾಲಿಸಿದೆವು. ಜೀವನದಲ್ಲಿ ಮೊದಲ ಬಾರಿಗೆ ಜಿಗಣೆಯಿಂದ ನರಕಯಾತನೆ ಅನುಭವಿಸಿದರೂ, ಟ್ರೆಕ್ಕಿಂಗ್ ಮಾತ್ರ ವಂಡರ್‌ಫುಲ್. ಅಷ್ಟು ದೂರ ನಾವೆಲ್ಲ ನಡೆದದ್ದಾ ! ಅನ್ನೋದೇ ವಿಪರ್ಯಾಸ. ಅಲ್ಲಿಂದ ಬಂದು ಸ್ನಾನ ಮುಗಿಸಿ, ಉಪಹಾರ ತಿಂದು ಮತ್ತೆ ಪ್ರಯಾಣ ಬೆಳೆಸುವ ಮೊದಲು ಒಂದು ಗ್ರೂಫ್ ಫೋಟೊ ತೆಗೆದು ಬಸ್‌ನಲ್ಲಿ ಕುಳಿತೆವು. ಆದರೆ, ವಾಪಾಸ್ಸು ಬರಲು ಮಾತ್ರ ಮನಸ್ಸಿಗೆ ಅತೀವ ಬೇಸರವಾಗಿತ್ತು.
ನಾವು ಮರಳಿ ಊರು ಸೇರುವ ದಿನ 12ನೇ ತಾರೀಕು ಮತದಾನ ನಡೆಯುತ್ತಿದ್ದು, ನಾವೆಲ್ಲ ನಮ್ಮ ಮೊದಲ ಮತದಾನ ಹಕ್ಕನ್ನು ಚಲಾಯಿಸಲು ಸಂತೋಷದಿಂದ ಹೊರಟೆವು.
ಅಂತೂ ಎರಡು ದಿನದ ಈ ರಸಾನುಭವದಲ್ಲಿ ಪ್ರಕೃತಿ ರಮಣೀಯತೆ ಹೇಳತೀರದು. ಎಲ್ಲ ಸಂಭ್ರಮದಲ್ಲೂ ಮತದಾನವ ಮರೆಯದೆ ಮತ ಚಲಾಯಿಸಿದ್ದು ಕೂಡ ಅಷ್ಟೇ ಆನಂದವನ್ನು ನೀಡಿತ್ತು. ಈಗಲೂ ನಮ್ಮ ಪುಟಾಣಿಗಳು, ಗೆಳತಿಯರು ಹೇಳುವುದೊಂದೇ, We miss that votecad nature camp and wonderful kodagu ಅಂತ.
ಅರ್ಪಿತಾ
ಬಾಲ ಸಂರಕ್ಷಣಾ ಕೇಂದ್ರ, ಕುತ್ತಾರುಪದವು, ಮುನ್ನೂರು, ಮಂಗಳೂರು