ನವದೆಹಲಿ: ವಿಶ್ವದ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ಕಂಪನಿ ಕೋಲ್ ಇಂಡಿಯಾ ಹಾಗೂ ಬ್ಯಾಂಕೊಂದರ ಷೇರುಗಳನ್ನು ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ ಸುಮಾರು 20 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಷೇರುಗಳನ್ನು ಮಾರಿ, ಆದಾಯ ಕ್ರೋಢೀಕರಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಆದರೆ, ಷೇರುಗಳನ್ನು ಮಾರುವ ನಿರ್ಧಾರ ಷೇರು ಮಾರುಕಟ್ಟೆಯ ಸ್ಥಿತಿಗತಿಗಳನ್ನು ಅವಲಂಬಿಸಿದೆ.
ಕೋಲ್ ಇಂಡಿಯಾ ಕಂಪನಿಯ ವಿಷಯದಲ್ಲಿ, ಒಂದು ವೇಳೆ, ಷೇರುಗಳ ಮಾರಾಟ ಲಾಭದಾಯಕವಲ್ಲ ಎನಿಸಿದರೆ, ಕಂಪನಿಯೇ ಸರ್ಕಾರದಿಂದ ಷೇರುಗಳನ್ನು ಮರಳಿ ಖರೀದಿಸಲು ಯೋಜಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಆದರೆ, ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಸ್ತುತ ಕೋಲ್ ಇಂಡಿಯಾದಲ್ಲಿ ಸರ್ಕಾರ ಶೇ.66ರಷ್ಟು ಪಾಲು ಹೊಂದಿದೆ. 2015ರ ಜನವರಿಯಲ್ಲಿ ಸರ್ಕಾರ ಶೇ.10ರಷ್ಟು ಷೇರುಗಳನ್ನು ಮಾರಾಟ ಮಾಡಿ, 22,550 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು.