ಹಾವೇರಿ: ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಸೆ.8 ಮತ್ತು 9ರಂದು ಜಿಲ್ಲೆಗೆ ಆಗಮಿಸಿ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ನಿರಂತರ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳ ವೀಕ್ಷಣೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂತರ ಮಂತ್ರಾಲಯದ ಕೇಂದ್ರ ಅಧ್ಯಯನ ತಂಡ (ಐಎಂಸಿಟಿ) ಜಿಲ್ಲೆಯ ಮಳೆಹಾನಿ ಪ್ರದೇಶ ವೀಕ್ಷಣೆ ಹಿನ್ನೆಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸೆ.8ರಂದು ಸಂಜೆ ಜಿಲ್ಲೆಗೆ ಭಾರತ ಸರ್ಕಾರದ ಜಲಶಕ್ತಿ ಇಲಾಖೆಯ ಅಶೋಕಕುಮಾರ ನೇತೃತ್ವದ ತಂಡ ಆಗಮಿಸಿ ಜಿಲ್ಲಾಡಳಿತದೊಂದಿಗೆ ಚರ್ಚಿಸಲಿದೆ. ಸೆ.9ರಂದು ಅತಿವೃಷ್ಟಿಯಿಂದ ಹಾನಿಯಾದ ಜಿಲ್ಲೆಯ ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸಂಜೆ ಹುಬಳ್ಳಿಯತ್ತ ಜಿಲ್ಲೆಗೆ ಪ್ರಯಾಣ ಬೆಳೆಸಲಿದೆ ಎಂದರು.
ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಹಾನಿ, ಮನೆಹಾನಿ, ಅಂಗನವಾಡಿ-ಶಾಲೆ, ಕಟ್ಟಡಗಳು ಸೇರಿದಂತೆ ರಸ್ತೆ-ಸೇತುವೆ, ವಿದ್ಯುತ್ ಸಂಪರ್ಕಗಳ ಹಾನಿ ಒಳಗೊಂಡಂತೆ ಮೂಲ ಸೌಕರ್ಯಗಳ ಹಾನಿ ಕುರಿತಂತೆ ಇಲಾಖೆವಾರು ಮಾಹಿತಿ ಕ್ರೋಢೀಕರಿಸಬೇಕು. ಹಾನಿಯಾದ ಪ್ರದೇಶಗಳ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.
ಈ ವೇಳೆ ಜಿಪಂ ಸಿಇಒ ಮಹಮ್ಮದ್ ರೋಷನ್, ಅಪರ ಜಿಲ್ಲಾಧಿಕಾರಿ ಡಾ| ಎನ್. ತಿಪ್ಪೇಸ್ವಾಮಿ, ಹಾವೇರಿ ಉಪ ವಿಭಾಗಾಧಿಕಾರಿ ಶಿವಾನಂದ ಉಳ್ಳೆಗಡ್ಡಿ, ಸವಣೂರು ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರದೀಪ ಎಲ್., ರೇಷ್ಮೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿರಕ್ತಮಠ, ಹಾವೇರಿ ತಹಶೀಲ್ದಾರ್ ಗಿರೀಶ ಸ್ವಾದಿ, ಹಾನಗಲ್ಲ ತಹಶೀಲ್ದಾರ್ ಯರಿಸ್ವಾಮಿ, ಬ್ಯಾಡಗಿ ತಹಶೀಲ್ದಾರ್ ತಿಪ್ಪೇಸ್ವಾಮಿ, ಸವಣೂರು ತಹಶೀಲ್ದಾರ್ ಅನಿಲಕುಮಾರ, ಹಾವೇರಿ ತಾಪಂ ಇಒ ಬಸವರಾಜ ಡಿ.ಸಿ ಇದ್ದರು.
ಕೇಂದ್ರ ತಂಡ ವೀಕ್ಷಣೆಗೆ ಅನುಕೂಲವಾಗುವಂತೆ ರೂಟ್ ಮ್ಯಾಪ್ ರಚಿಸಬೇಕು. ಹಾನಿಯಾದ ಬೆಳೆ, ಮನೆ, ರಸ್ತೆ ಸೇತುವೆ ಇತರೆ ಹಾನಿಗಳ ಕುರಿತಂತೆ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಪವರ್ ಪಾಯಿಂಟ್ ಪ್ರಸ್ತುತ ಪಡಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಕೇಂದ್ರ ತಂಡದ ಎದುರು ಹಾನಿ ವಿವರ ಇಲಾಖೆವಾರು ಪರಿಣಾಮಕಾರಿಯಾಗಿ ಮಂಡಿಸಬೇಕು. –
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ