ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವಲ್ಲಿ ವಿಫಲವಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೂರಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಜೀವ ಉಳಿಸಿ ಎಂದು ಭಿಕ್ಷುಕರಂತೆ ಕೇಳಿಕೊಂಡರೂ ಸರ್ಕಾರ ಲಸಿಕೆ ಖರೀದಿಗೆ ಅವಕಾಶ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನ ಶಾಸಕರು, ವಿಧಾನ ಪರಿಷತ್ ಸದಸ್ಯರು 100 ಕೋಟೆಯಲ್ಲಿ ಲಸಿಕೆ ಖರೀದಿಗೆ ಅವಕಾಶ ಕೊಡಿ ಎಂದು ಸರ್ಕಾರಕ್ಕೆ ಕೇಳಿಕೊಂಡರೂ ಅವಕಾಶ ನೀಡಲಿಲ್ಲ. ಬಹಳಷ್ಟು ಮನವಿ ಮಾಡಿಕೊಂಡರೂ ಅವಕಾಶ ನೀಡದ ಸಂದರ್ಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದವರು ಒಂದು ಲಕ್ಷ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಮುಂದಾಗಿರುವುದು ದೇಶದ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕ, ಇಡೀ ದೇಶಕ್ಕೆ ಮಾದರಿ ಕಾರ್ಯಕ್ರಮ ಎಂದು ಬಣ್ಣಿಸಿದರು.
ರಾಜ್ಯ ಸರ್ಕಾರ ಲಸಿಕೆ ಇತರೆ ಸೌಲಭ್ಯ ಒದಗಿಸುವಲ್ಲಿ ಏನು ಮಾಡಿದೆ, ಏನು ಮಾಡಿಲ್ಲ ಎಂದು ಟೀಕೆ ಮಾಡಲಿಕ್ಕೆ ಹೋಗುವುದಿಲ್ಲ ಎಂದರು. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿವ ಕಾರ್ಯಕ್ರಮ ವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿ, ಯುವ, ಮಹಿಳಾ ಕಾಂಗ್ರೆಸ್ ನವರಿಗೆ ಆನ್ ಲೈನ್ ನೋಂದಣಿ ನಿರ್ವಹಣೆ ಮಾಡಲು ತಿಳಿಸಲಾಗಿತ್ತು. ಆದರೆ, ನೋಂದಣಿಯನ್ನೇ ನಿಲ್ಲಿಸಲಾಗಿದೆ. ಲಸಿಕೆ ಪ್ರಕ್ರಿಯೆಯಲ್ಲಿ ನಿರಂತರೆಯತೆ ಇಲ್ಲ ಎಂದು ದೂರಿದ ಅವರು ಜೀವ ಹೋದರೂ ಕಾಂಗ್ರೆಸ್ ಜನರ ಜೀವ ಉಳಿಸುವ, ಲಸಿಕೆ ಕೊಡಿಸುವ ಕಾರ್ಯ ಮುಂದುವರೆಸಲಿದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಜಗಳದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಥಾ ರಾಜ ತಥಾ ಪ್ರಜೆ, ಯಥಾ ರಾಜ ತಥಾ ಅಧಿಕಾರಿಗಳು. ಮೈಸೂರಿನಲ್ಲಿರುವ ಶಾಸಕರು, ಸಚಿವರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದರು.
ಮಂತ್ರಿಯೊಬ್ಬರು ಸ್ವಾಮೀಜಿಯೊಬ್ಬರ ಬಳಿ ಸಿಡಿ ತೆಗೆದುಕೊಂಡು ಹೋಗಿದ್ದು ನೋಡಿದರೆ ಸರ್ಕಾರಕ್ಕೆ ನಾಚಿಕೆ ಆಗಬೇಕು. ಸ್ವಾಮೀಜಿಯವರು ಬೈದು ಕಳಿಸಿದ್ದಾರೆ ಎಂದರು. ಯಾವ ಸಿಡಿ ಎಂದು ಕೇಳಿದಾಗ ಅದೇ ಯತ್ನಾಳ್ ಹೇಳುತ್ತಾ ಇರುತ್ತಾರಲ್ಲ ಆ ಸೀಡಿ ಎಂದರು.