Advertisement

AIIMS; ರಾಯಚೂರಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸಕಾರಾತ್ಮಕ ಸ್ಪಂದನೆ: ಡಾ. ಶರಣಪ್ರಕಾಶ

01:07 PM Aug 25, 2023 | Team Udayavani |

ಕಲಬುರಗಿ: ರಾಯಚೂರಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪನೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದರು.

Advertisement

ಶುಕ್ರವಾರ ಜಿಮ್ಸ್ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬುಧವಾರ ನವದೆಹಲಿಯಲ್ಲಿ ಕೇಂದ್ರದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಹಾಗೂ ಮುಖಂಡರೊಂದಿಗೆ ಭೇಟಿಯಾಗಿ ರಾಯಚೂರಲ್ಲಿ ಏಮ್ಸ್ ಸ್ಥಾಪಿಸುವಂತೆ ಪ್ರಸ್ತಾಪವನೆ ಸಲ್ಲಿಸಲಾಗಿದೆ. ರಾಜ್ಯ ಸರಕಾರ ಸೂಚಿಸುವ ಸ್ಥಳದಲ್ಲೇ ಏಮ್ಸ್ ಸ್ಥಾಪನೆಗೆ ಮುಂದಾಗುವುದಾಗಿ ತಿಳಿಸಲಾಗಿದೆ. ವಿಧಾನಸಭಾ ಚುನಾವಣೆ ವೇಳೆಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಮ್ಸ್ ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಅದರಂತೆ ನಡೆದುಕೊಳ್ಳಲಾಗುತ್ತಿದೆ ಎಂದು ಸಚಿವರು ವಿವರಣೆ ನೀಡಿದರು.

ವೈದ್ಯಕೀಯ ಕಾಲೇಜು ಕಟ್ಟಡಗಳ ತನಿಖೆಗೆ: ರಾಜ್ಯದ ಚಿಕ್ಕಬಳ್ಳಾಪುರ, ಹಾವೇರಿ, ಚಿಕ್ಕಮಗಳೂರು ಹಾಗೂ ಯಾದಗಿರಿಯಲ್ಲಿನ ವೈದ್ಯಕೀಯ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತನಿಖೆಗೆ ವಹಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು.

ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ನಿರ್ಮಾಣ ಟೆಂಡರ್ ಮೊತ್ತ 500 ಕೋ.ರೂ ಇರುವುದನ್ನು ಪರಿಷ್ಕರಿಸಿ‌ 800 ಕೋ.ರೂ.ಗೆ ಹೆಚ್ಚಿಸಲಾಗಿದೆ. ಒಮ್ಮೆಲೆ 300 ಕೋ.ರೂ ಹೆಚ್ಚಳ ಮಾಡಲಾಗಿದೆ. ಇದೇ ತೆರನಾಗಿ ಇತರ ಕಾಲೇಜುಗಳ ಕಟ್ಟಡ ನಿರ್ಮಾಣ ಮೊತ್ತದಲ್ಲೂ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ವರದಿ ಬಂದ ನಂತರ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ ತಿಳಿಸಿದರು.

Advertisement

ಡಿಸೆಂಬರ್ ನಲ್ಲಿ ಯುವ ನಿಧಿ: 2022- 23 ರಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ಪದವೀಧರರಿಗೆ ಮುಂದಿನ 24 ತಿಂಗಳ ಕಾಲ ನೀಡಲಾಗುವ ನಿರುದ್ಯೋಗ ಭತ್ಯೆಯ ಯುವನಿಧಿ ಯೋಜನೆ ಡಿಸೆಂಬರ್‌ನಲ್ಲಿ ಕಾರ್ಯಾನುಷ್ಠಾನಗೊಳಿಸಲು ಸಿದ್ದತೆಗಳು ನಡೆದಿವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದರು.

ಯುವನಿಧಿ ಯೋಜನೆಯು ತಮ್ಮ ಕೌಶಲ್ಯಾಭಿವೃದ್ಧಿ ಇಲಾಖೆಯಡಿಯೇ ಜಾರಿಗೊಳ್ಳುತ್ತಿದೆ. ಪದವೀಧರರು ಹಾಗೂ ಡಿಪ್ಲೋಮಾ ಮಾಡಿ ಹೊರಬರುವರು 5 ಲಕ್ಷ ಎಂದು ಅಂದಾಜಿಸಲಾಗಿದೆ. ಸೇವಾ ಸಿಂಧು ಆ್ಯಪ್ ರೂಪಿಸಲಾಗುತ್ತಿದೆ. ಇಲಾಖೆ ಈಗಾಗಲೇ ಮಾಹಿತಿ ಸಂಗ್ರಹಿಸಲಾಗಿದೆ. ಒಟ್ಟಾರೆ ಡಿಸೆಂಬರ್ ತಿಂಗಳಲ್ಲಿ ಯೋಜನೆ ಜಾರಿಗೆ ತರುವ ಸಿದ್ಧತೆಗಳು ನಡೆದಿವೆ ಎಂದು ವಿವರಣೆ ನೀಡಿದರು.

ಒಮ್ಮೆಲೆ ಪದವೀದರರು ಹೊರ ಬರುವುದಿಲ್ಲ. ಕೆಲವೊಂದು ಪದವಿಗಳ ಶೈಕ್ಷಣಿಕ ವೇಳೆ ಬದಲು ಇದೆ. ಹೀಗಾಗಿ ಏಕಕಾಲಕ್ಕೆ ಎಲ್ಲ ವಿದ್ಯಾರ್ಥಿಗಳಿಗೆ ಸೌಲಭ್ಯ ದೊರಕಲು ಸಾಧ್ಯವಿಲ್ಲ. ಪದವಿ ಪಡೆದ ಆರು ತಿಂಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next