ಮೈಸೂರು: ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯಲ್ಲಿ ನವ ಭಾರತ ಚೌಪಾಲ್ ಕಾರ್ಯಕ್ರಮವನ್ನು ವಿವಿಧೆಡೆ ಪ್ರದರ್ಶಿಸಲಾಯಿತು.
ಮೈಸೂರಿನ ಹಿನಕಲ್, ಹೂಟಗಳ್ಳಿ, ಶ್ರೀರಾಂಪುರ, ಬೋಗಾದಿ, ಬೆಲವತ್ತ, ದಟ್ಟಗಳ್ಳಿ ಸೇರಿದಂತೆ ಹಲವೆಡೆಗಳಲ್ಲಿ ನವ ಭಾರತ ಚೌಪಾಲ್ ಕಾರ್ಯಕ್ರಮ ಆಯೋಜಿಸಿ ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ಮಾಹಿತಿ ನೀಡಿದ್ದಲ್ಲದೆ, ಯೋಜನೆಗಳ ಫಲಾನುಭವಿಗಳನ್ನು ಸನ್ಮಾನಿಸಿ, ಈ ಯೋಜನೆಗಳಿಂದ ಫಲಾನುಭವಿಗಳು ಹೇಗೆ ಲಾಭ ಪಡೆದಿದ್ದಾರೆ ಎಂಬ ಬಗ್ಗೆ ವಾಹನಗಳಲ್ಲಿ ಎಲ್‌ಇಡಿ ಪರದೆಯ ಮೂಲಕ ವಿಡಿಯೋ ಪ್ರದರ್ಶನದ ಜೊತೆಗೆ ಸ್ಥಳೀಯ ಫಲಾನುಭವಿಗಳೂ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ವೇದಿಕೆ ಒದಗಿಸಲಾಯಿತು.
ಜನ್ ಕೀ ಬಾತ್: ಸ್ಥಳೀಯ ಕಲಾವಿದರ ಪ್ರದರ್ಶನಗಳು, ಲಕ್ಕಿ ಡ್ರಾ ಮತ್ತು ಚಿತ್ರಕಲಾ ಸ್ಪರ್ಧೆ, ಮನರಂಜನೆ ಕಾರ್ಯಕ್ರಮಗಳನ್ನೂ ಈ ವೇಳೆ ಆಯೋಜಿಸಲಾಗಿತ್ತು. ಸ್ಥಳೀಯ ನಿವಾಸಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗೆಗಿನ ಕೈಪಿಡಿಗಳು ಮತ್ತು ಮಾಹಿತಿ ಕಿರುಹೊತ್ತಿಗೆಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಭೇಟಿ ನೀಡುವ ಜನರನ್ನು ಸರ್ಕಾರದ ವಿವಿಧ ಯೋಜನೆಗಳನ್ನು ತಿಳಿದುಕೊಳ್ಳುವ ಬಗ್ಗೆ ಉತ್ತೇಜಿಸಿದ್ದಲ್ಲದೆ, ಪ್ರಧಾನಮಂತ್ರಿಗಳಿಗಾಗಿ ಜನತೆ ತಮ್ಮ ಸಂದೇಶ ತಿಳಿಸಲು ಜನ್ ಕೀ ಬಾತ್ ಬೂತ್ ಸಹ ಸ್ಥಾಪಿಸಲಾಗಿತ್ತು.
8 ಸಾವಿರ ಕಾರ್ಯಕ್ರಮ: ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಫೆಬ್ರವರಿಯಿಂದ ದೇಶಾದ್ಯಂತ 318 ಜಿಲ್ಲೆಗಳಲ್ಲಿ ನವಭಾರತ ಚೌಪಾಲ್ ಶೀರ್ಷಿಕೆಯ ಸುಮಾರು 8,000 ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಜನ ಸಾಮಾನ್ಯರ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಸಾಧನೆಗಳನ್ನು ಅದರ ವಿವಿಧ ಯೋಜನೆಗಳ ಮೂಲಕ ತೋರಿಸುವ ಉದ್ದೇಶದಿಂದ ರೂಪಿಸಿರುವ ಈ ಕಾರ್ಯಕ್ರಮವು ಯಶಸ್ಸಿನ ಕಥೆಗಳನ್ನು ಜನತೆಗೆ ತೋರಿಸುವ ಮೂಲಕ ವಿವಿಧ ಯೋಜನೆಗಳ ಕಡೆಗೆ ಗಮನವನ್ನು ಸೆಳೆಯಲು ಮತ್ತು ಆ ಮೂಲಕ ಹೆಚ್ಚು ಜನರನ್ನು ವಿವಿಧ ಯೋಜನೆಗಳ ಪ್ರಯೋಜನ ಪಡೆಯುವಂತೆ ಉತ್ತೇಜಿಸುವಲ್ಲಿ ನವ ಭಾರತ ಚೌಪಾಲ್ ಉತ್ತಮ ವೇದಿಕೆಯಾಗಿದೆ.
ಯೋಜನೆಗಳ ಮನವರಿಕೆ: ಅಟಲ್ ಪೆನ್ಶನ್ ಯೋಜನೆ, ಪ್ರಧಾನಮಂತ್ರಿ ಜನಧನ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆ, ಪ್ರಧಾನಮಂತ್ರಿ ಮುದ್ರಾ ಯೋಜನೆ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಮಗಳನ್ನು ರಕ್ಷಿಸಿ-ಮಗಳನ್ನು ಓದಿಸಿ, ಸುಕನ್ಯ ಸಮೃದ್ಧಿ ಯೋಜನೆ, ಪ್ರಧಾನಮಂತ್ರಿ ಜನ ಆರೋಗ್ಯ ಕೇಂದ್ರ, ಪ್ರಧಾನಮಂತ್ರಿ ಫಸಲು ವಿಮೆ ಯೋಜನೆ,
ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆ, ಸ್ಕಿಲ್ ಇಂಡಿಯಾ, ಪ್ರಧಾನಮಂತ್ರಿ ಸೌಭಾಗ್ಯ ಯೋಜನೆ, ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆ, ಪ್ರಧಾನಮಂತ್ರಿ ವಸತಿ ಯೋಜನೆ, ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಟ್ಟು, ಜನ ಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು.