Advertisement
2018ರಿಂದ ಇಲ್ಲಿವರೆಗೆ ರಾಜ್ಯದಲ್ಲಿ ಸುಮಾರು 63 ಹೊಸ ತಾಲೂಕುಗಳನ್ನು ರಚಿಸಲಾಗಿದ್ದು, ಅವುಗಳ ಪೈಕಿ ಕೇವಲ 14 ಕಡೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಪ್ರಜಾ ಸೌಧವನ್ನು ಕಟ್ಟಲಾಗಿದೆ. ಉಳಿದ 49ಕ್ಕೆ ಈ ಭಾಗ್ಯ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ.ಉಳಿದ ಕಡೆ ಜಿಲ್ಲಾಧಿಕಾರಿಗಳಿಂದ ಜಮೀನು ಗುರುತಿಸುವ ಕೆಲಸ, ಅವರಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ, ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ಮತ್ತಿತರ ಹಂತಗಳಲ್ಲಿ ಪ್ರಜಾ ಸೌಧಗಳು ನಿಂತಿವೆ. ಒಂದು ಪ್ರಜಾ ಸೌಧ ಕಟ್ಟಲು ಕನಿಷ್ಠ 5 ಎಕರೆ ಜಾಗ ಬೇಕು. ಆದರೆ ಬಹುತೇಕ ಕಡೆ ಸೂಕ್ತ ಸರಕಾರಿ ಜಮೀನು ಲಭ್ಯವಿಲ್ಲದಿರುವುದು ಪ್ರಜಾ ಸೌಧ ನಿರ್ಮಾಣಕ್ಕೆ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಒಂದು ಪ್ರಜಾ ಸೌಧ ಕಟ್ಟಲು 10ರಿಂದ 12 ಕೋಟಿ ರೂ.ಗಳ ಪ್ರಸ್ತಾವನೆ ಜಿಲ್ಲಾಧಿಕಾರಿಗಳಿಂದ ಬರುತ್ತಿದೆ. ಆದರೆ, ಏಕರೂಪ ಮತ್ತು ವಿನ್ಯಾಸದ ಪ್ರಜಾ ಸೌಧ ನಿರ್ಮಾಣಕ್ಕೆ ಸರಕಾರ 8.60 ಕೋಟಿ ರೂ. ನಿಗದಿಪಡಿಸಿದೆ. ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಮತ್ತು ಸರಕಾರ ನಿಗದಿಪಡಿಸಿರುವ ಅನುದಾನದಲ್ಲಿ ವ್ಯತ್ಯಾಸ ಇರುವುದು ಹಾಗೂ ಏಕರೂಪ ಎಂಬ ಸರಕಾರದ ಷರತ್ತು ಸಹ ಸಮಸ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ತಾಲೂಕು ಕೇಂದ್ರ ಕಚೇರಿಗಳ ನಿರ್ಮಾಣಕ್ಕೆ ಹಂತ-ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಮೊದಲು ಹೇಳಿತ್ತು. 2024-25ನೇ ಸಾಲಿನಲ್ಲಿ 25 ಹೊಸ ತಾಲೂಕುಗಳಲ್ಲಿ ಪ್ರಜಾಸೌಧ ಕಟ್ಟಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ನಡುವೆ ಮುಂದಿನ 2 ವರ್ಷಗಳಲ್ಲಿ ಬಾಕಿ ಉಳಿದಿರುವ ಎಲ್ಲ ಹೊಸ ತಾಲೂಕು ಕೇಂದ್ರಗಳಿಗೆ ಪ್ರಜಾಸೌಧ ಮಂಜೂರು ಮಾಡುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ. ಸುಮಾರು 49ಕ್ಕೂ ಅಧಿಕ ಕಡೆ ಈ ಅವಧಿಯಲ್ಲಿ ಪ್ರಜಾ ಸೌಧ ಕಟ್ಟಲು ಹಣಕಾಸು ಹೊಂದಿಸುವ ಸವಾಲು ಸರಕಾರದ ಮುಂದಿದೆ. ಈಗಿರುವುದು ಬಿಟ್ಟು ಹೊಸ ತಾಲೂಕು ರಚನೆ ಪ್ರಸ್ತಾವನೆ ಸದ್ಯಕ್ಕೆ ಬೇಡ ಎಂದು ಆರ್ಥಿಕ ಇಲಾಖೆ ಹೇಳಿದೆ ಎಂದು ತಿಳಿದು ಬಂದಿದೆ.
Related Articles
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೂಡುಬಿದಿರೆ, ಕಡಬ, ಉಳ್ಳಾಲ, ಮೂಲ್ಕಿ, ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿ ಸಹಿತ ರಾಜ್ಯದ ವಿವಿಧ ಜಿಲ್ಲೆಗಳ 49 ತಾಲೂಕುಗಳಲ್ಲಿ ಒಂದೇ ಸೂರಿನಡಿ ಪ್ರಜಾಸೌಧ ಸಂಕೀರ್ಣ ನಿರ್ಮಿಸಲಾಗುತ್ತದೆ.
Advertisement
– ರಫೀಕ್ ಅಹ್ಮದ್