Advertisement
ಸಂಸದ ಶಿವಕುಮಾರ ಉದಾಸಿ 2009ರಿಂದ ಎದುರಾಳಿ ಕಾಂಗ್ರೆಸ್‌ನ್ನು ಮಣಿಸಿ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಕಳೆದ ಆಡಳಿತಾವಧಿ ಸಂಸತ್ ಅಧಿವೇಶನದಲ್ಲಿ ಹೆಚ್ಚು ಹಾಜರಾತಿ ಹಾಗೂ ಪ್ರಮುಖ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿ ಉದಾಸಿ ಅವರು ಪ್ರಧಾನಿ ಮೋದಿ ಅವರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ ಕೇಂದ್ರ ಹಣಕಾಸು ಸಮಿತಿ, ಪಬ್ಲಿಕ್ ಅಕೌಂಟ್ಸ್ ಸಮಿತಿ ಸದಸ್ಯರಾಗಿ ಯೋಜನೆ ರೂಪಿಸಲು ಅತ್ಯುತ್ತಮ ಸಲಹೆ ನೀಡಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದರು. ಈ ಎಲ್ಲ ಕಾರಣಗಳಿಂದಾಗಿ ಶಿವಕುಮಾರ ಉದಾಸಿ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಜಾತಿ ಸಮೀಕರಣದ ವಿಚಾರದಲ್ಲಿಯೂ ಶಿವಕುಮಾರ ಉದಾಸಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯಯುಳ್ಳ ಲಿಂಗಾಯತರಿಗೆ ಸಚಿವ ಸ್ಥಾನ ನೀಡುವ ಲೆಕ್ಕಾಚಾರ ನಡೆದರೆ ಇಲ್ಲಿ ಶಿವಕುಮಾರ ಉದಾಸಿ ಅವರನ್ನು ಪರಿಗಣಿಸಬಹುದು ಎನ್ನಲಾಗಿದೆ.
ಶಿವಕುಮಾರ ಉದಾಸಿ ಕೇಂದ್ರ ಸಚಿವರಾಗಲು ಎಲ್ಲ ರೀತಿಯಲ್ಲಿ ಅರ್ಹರಾಗಿದ್ದಾರೆ. ಪ್ರಧಾನಿ ಮೋದಿ ಅವರು ಉದಾಸಿ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವ ನಿರೀಕ್ಷೆ ಇದೆ. ಉದಾಸಿ ಅವರಿಗೆ ಸಚಿವ ಸ್ಥಾನ ದೊರೆತರೆ ಕ್ಷೇತ್ರದಲ್ಲಿ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ.
-ಶಿವರಾಜ ಸಜ್ಜನರ, ಬಿಜೆಪಿ ಜಿಲ್ಲಾಧ್ಯಕ್ಷ
ಉದಾಸಿ ಪರಿಚಯ:
ಶಿವಕುಮಾರ ಉದಾಸಿ ಜಿಲ್ಲೆಯ ಹಾನಗಲ್ಲ ಪಟ್ಟಣದವರು. ಶಿವಕುಮಾರ ಉದಾಸಿ 52 ವರ್ಷ ವಯೋಮಾನದವರಾಗಿದ್ದು, 1984ರಿಂದ 1999ವರೆಗೆ ಬಿಇ ಮೆಕ್ಯಾನಿಕಲ್ ಅಧ್ಯಯನ ಮಾಡಿದ್ದಾರೆ. ಕೃಷಿ ಹಾಗೂ ವ್ಯವಹಾರ ಅವರ ವೃತ್ತಿ. ತಂದೆ ಸಿ.ಎಂ. ಉದಾಸಿ ಹಿರಿಯ ರಾಜಕಾರಣಿಯಾಗಿದ್ದು, ಪ್ರಸ್ತುತ ಹಾನಗಲ್ಲ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.
ಜಾತಿ ಲೆಕ್ಕಾಚಾರ ಹೇಗಿದೆ?:
ಶಿವಕುಮಾರ ಉದಾಸಿ ಅವರಿಗೆ ಸಚಿವ ಸ್ಥಾನ ಸಿಗಲು ಧನಾತ್ಮಕ ಅಂಶಗಳೇ ಹೆಚ್ಚಾಗಿವೆ. ಆದರೂ ಜಾತಿ ಸಮೀಕರಣದ ಇನ್ನೊಂದು ಲೆಕ್ಕಾಚಾರದಲ್ಲಿ ಸ್ವಲ್ಪ ಹಿನ್ನಡೆಯೂ ಆಗುವ ಸಾಧ್ಯತೆ ಇದೆ. ರಾಜ್ಯ ರಾಜಕಾರಣದಲ್ಲಿ ರಾಜಕೀಯ ಬದಲಾವಣೆಯಾಗಿ ಬಿಜೆಪಿ ಸರ್ಕಾರ ರಚನೆಯಾದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ. ಲಿಂಗಾಯತ ಮುಖಂಡರಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗುವುದರಿಂದ ಅದೇ ಸಮುದಾಯದ ಮುಖಂಡರಿಗೆ ಕೇಂದ್ರ ಸಚಿವ ಸ್ಥಾನ ಪಡೆಯಲು ಹಿನ್ನಡೆಯಾಗಬಹುದು ಎಂಬ ಲೆಕ್ಕಾಚಾರವೂ ನಡೆದಿದೆ.
ನಾನು ಸಚಿವ ಸ್ಥಾನದ ಕನಸು ಕಂಡಿಲ್ಲ. ಜನರು ನನ್ನನ್ನು ಮೂರನೇ ಬಾರಿ ಗೆಲ್ಲಿಸಿ ಅವರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಂಸದನಾಗಿ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಪಕ್ಷ ಯಾವ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ. ಸಚಿವ ಸ್ಥಾನ ಕೊಡುವುದು ಪಕ್ಷ ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರ -ಶಿವಕುಮಾರ ಉದಾಸಿ,ಸಂಸದ
•ಎಚ್.ಕೆ. ನಟರಾಜ