ಮಂಗಳೂರು: ಪ್ರಧಾನ ಮಂತ್ರಿ ಮತ್ಸé ಸಂಪದ ಯೋಜನೆ (ಪಿಎಂಎಂಎಸ್‌ವೈ)ಯಡಿ ಕೇಂದ್ರ ಸರಕಾರದ ಸಹಾಯಧನದಲ್ಲಿ ನೀಡಲಾಗುವ ದೋಣಿಗಳಿಗೆ ಕರಾವಳಿಯ ಸಾಂಪ್ರದಾಯಿಕ ಮೀನುಗಾರರ ಬೇಡಿಕೆಯ ಅನುಸಾರ ತಾಂತ್ರಿಕ ಮಾರ್ಪಾಡುಗಳು ಅಗತ್ಯವಿದ್ದಲ್ಲಿ ಇಲಾಖೆಯ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪರಷೋತ್ತಮ ರೂಪಾಲ ಹೇಳಿದರು.
ಸಾಗರ ಪರಿಕ್ರಮ-2023 ನಾಲ್ಕನೇ ಹಂತದ ಕಾರ್ಯಕ್ರಮವನ್ನು ರವಿವಾರ ನಗರದ ಡಾ| ಟಿಎಂಎ ಪೈ ಕನ್ವೆನ್ಶನ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮೀನುಗಾರಿಕಾ ತಂಗುದಾಣ, ಕೋಲ್ಡ್ ಸ್ಟೋರೇಜ್ ಸೇರಿದಂತೆ ವಿವಿಧ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲು ಕರ್ನಾಟಕಕ್ಕೆ ಇಲಾಖೆಯಿಂದ 8,000 ಕೋಟಿ ರೂ.ಗಳ ತುರ್ತು ನಿಧಿ ಘೋಷಿಸಲಾಗಿದೆ. ಕೇಂದ್ರದ ಯೋಜನೆ ಜತೆಗೆ ರಾಜ್ಯ ಸರಕಾರ ಯೋಜನೆಗಳ ಮಾಹಿತಿ, ಅನುಷ್ಠಾನ ಮಾಡಲು ಇಲಾಖೆಯ ಅಧಿ ಕಾರಿಗಳು ಹೆಚ್ಚು ಶ್ರಮಿಸಬೇಕು ಎಂದರು.
ಮಂಗಳೂರಿನಲ್ಲಿ ಮೀನುಗಾರಿಕೆ ವಿ.ವಿ. ಸ್ಥಾಪಿಸಲು ಅವಕಾಶ ಕಲ್ಪಿಸಬೇಕು. ಗೋವಾ ಮತ್ತು ಕೇರಳದ ಕರಾವಳಿಯಲ್ಲಿ ಜಿಲ್ಲೆಯ ಆಳ ಸಮುದ್ರ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಮಂಗಳೂರು ಬಂದರು 49.50 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರುತ್ತಿದ್ದು, ಅಗತ್ಯ ಅನುದಾನ ಒದಗಿಸಬೇಕು. ನಾಡದೋಣಿಗಳಿಗೆ ಸೀಮೆಎಣ್ಣೆ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದರು.
ಕಿಸಾನ್ ಕ್ರೆಡಿಟ್ ಕಾರ್ಡ್, ಐಸ್ ಪ್ಲಾಂಟ್ ನಿರ್ಮಾಣ, ಪುನನಿರ್ಮಾಣ ಸೇರಿದಂತೆ ಮೀನುಗಾರಿಕೆ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸವಲತ್ತುಗಳನ್ನು ವಿತರಿಸಲಾಯಿತು.
ರೂಪಾಲ ಅವರ ಪತ್ನಿ ಸವಿತಾ ಬೆನ್ ರೂಪಾಲ, ಇಲಾಖೆಯ ಜಂಟಿ ನಿರ್ದೇಶಕ ಡಾ| ಜೆ. ಬಾಲಾಜಿ, ಪಶುಸಂಗೋಪನ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ. ಫಾಹೀಮ್, ಕೆಎಫ್ ಡಿಸಿಯ ಅಧ್ಯಕ್ಷ ಎ.ವಿ. ತೀರ್ಥರಾಮ, ಕೋಸ್ಟ್ ಗಾರ್ಡ್‌ನ ಡಿಐಜಿ ಪಿ.ಕೆ. ಶರ್ಮ, ಮೂಡ ಅಧ್ಯಕ್ಷ ರವಿಶಂಕರ್ ಮಿಜಾರು, ಎನ್‌ಎಫ್‌ಡಿಬಿಯ ಹಿರಿಯ ಕಾ.ನಿ. ನಿರ್ದೇಶಕ ಡಾ| ಎಲ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಚಾರಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಮತ್ತು ಮಂಜುನಾಥ್ ನಿರೂಪಿಸಿದರು.