ಹೊಸದಿಲ್ಲಿ: ಸಹಕಾರಿ ವಲಯದಲ್ಲಿ ವಿಶ್ವದಲ್ಲೇ ಅತೀದೊಡ್ಡ ಧಾನ್ಯ ಸಂಗ್ರಹ ಸಾಮರ್ಥ್ಯದ ರಚನೆಯನ್ನು ನಿರ್ಮಿಸುವ 1 ಲಕ್ಷ ಕೋಟಿ ರೂ.ವೆಚ್ಚದ ಯೋಜನೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೇಶದಲ್ಲಿ ಆಹಾರ ಭದ್ರತೆಯನ್ನು ಖಾತರಿಪಡಿಸಿಕೊಳ್ಳುವುದರ ಜತೆಗೆ ಬೆಳೆಹಾನಿಯನ್ನು ಕಡಿಮೆ ಮಾಡಿ, ರೈತರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಸರಕಾರವು 700 ಲಕ್ಷ ಟನ್ ಸಂಗ್ರಹ ಸಾಮರ್ಥ್ಯ ವಿರುವ ಸಂಗ್ರಹಣಾಗಾರವನ್ನು ಮುಂದಿನ ಐದು ವರ್ಷಗಳಲ್ಲಿ ನಿರ್ಮಿಸಲಿದೆ. ಇದ ರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ. ಯೋಜನೆಗೆ 1 ಲಕ್ಷ ಕೋಟಿ ರೂ.ಗಳ ವೆಚ್ಚವನ್ನು ಅಂದಾಜಿಸಿ ಅನುಮೋದನೆ ನೀಡಲಾಗಿದೆ. ಯೋಜನೆ ಪ್ರಕಾರ ಪ್ರತೀ ಬ್ಲಾಕ್‌ನಲ್ಲಿ 2,000 ಟನ್ ಧಾನ್ಯ ಸಂಗ್ರಹ ಸಾಮರ್ಥ್ಯದ ಗೋದಾಮನ್ನು ನಿರ್ಮಿಸಲಾಗುವುದು ಇದು ಸಹಕಾರಿ ವಲಯವನ್ನು ಬಲಪಡಿಸಲು ನೆರವಾಗಲಿದೆ. ಪ್ರಸಕ್ತ ದೇಶದಲ್ಲಿ ಧಾನ್ಯ ಉತ್ಪಾದನ ಸಾಮರ್ಥ್ಯವು 3,100 ಲಕ್ಷ ಟನ್ ನಷ್ಟಿದೆ. ಆದರೆ ಸಂಗ್ರಹ ಸಾಮರ್ಥ್ಯವು ಕೇವಲ ಶೇ.47ರಷ್ಟಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.