ಗೊಂದಲ – ವಿವಾದದಿಂದ ನಗರದ ಅತ್ಯಂತ ದೊಡ್ಡ ಹಾಗೂ ಹಳೆಯ ಮಾರುಕಟ್ಟೆಯಾದ ಸೆಂಟ್ರಲ್ ಮಾರ್ಕೆಟ್‌ನ ಪೂರ್ಣ ಪ್ರಯೋಜನ ಜನತೆಗೆ ಸಿಗದಂತಾಗಿದೆ. ಇನ್ನಾದರೂ ಅವುಗಳನ್ನು ನಿವಾರಿಸುವ ಕೆಲಸ ತುರ್ತಾಗಿ ಆಗಬೇಕಿದೆ.
ಮಹಾನಗರ: ನಗರದ ಹೃದಯ ಭಾಗವಾದ ಹಂಪನಕಟ್ಟೆ ಬಳಿಯ ಕೇಂದ್ರ ಮಾರುಕಟ್ಟೆಗೆ 7 ದಶಕಗಳಿಗೂ ಅಧಿಕ ಇತಿಹಾಸವಿದೆ. ಈಗಿರುವ ಶಿಥಿಲವಾದ ಕಟ್ಟಡಕ್ಕೆ 50 ವರ್ಷಗಳ ಚರಿತ್ರೆ ಇದೆ. ಆದರೆ ನಗರದ ಅತ್ಯಂತ ದೊಡ್ಡ ಹಾಗೂ ಹಳೆಯ ಮಾರುಕಟ್ಟೆಯಾದ ಸೆಂಟ್ರಲ್ ಮಾರ್ಕೆಟ್ ಪರಿಸ್ಥಿತಿ 11 ತಿಂಗಳಿನಿಂದ ತ್ರಿಶಂಕು ಸ್ಥಿತಿಯಲ್ಲಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಮಾರ್ಕೆಟ್ ಆಗಿ ನಿರ್ಮಿಸಲು ಹಾಗೂ ಕೊರೊನಾ ಕಾರಣದಿಂದ ಸೆಂಟ್ರಲ್ ಮಾರ್ಕೆಟ್ ಅನ್ನು ಕಳೆದ ವರ್ಷ ಎಪ್ರಿಲ್‌ನಲ್ಲಿ ಮುಚ್ಚಲಾಗಿತ್ತು. ವ್ಯಾಪಾರಿಗಳು ಕೋರ್ಟ್ ಮೆಟ್ಟಲೇರಿದಾಗ, ನ್ಯಾಯಾಲಯವು ಅಧಿಕೃತ ವ್ಯಾಪಾರಸ್ಥರಿಗೆ ವಹಿವಾಟು ನಡೆಸಲು ಅವಕಾಶ ನೀಡುವಂತೆ ಸೂಚಿಸಿತು. ಆಗ ಪಾಲಿಕೆಯು 35 ಮಂದಿ ಅಧಿಕೃತ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿತು. ಕೆಲವರು ಅಕ್ಟೋಬರ್‌ನಿಂದ ವ್ಯವಹಾರ ಪುನರಾರಂಭಿಸಿದ್ದಾರೆ. ಈಗ ಮಾರ್ಕೆಟ್ ಕಟ್ಟಡದ ಹೊರ ಭಾಗ, ಒಳಗಡೆ ಬೆರಳೆಣಿಕೆಯ ವ್ಯಾಪಾರಿಗಳು ವ್ಯವಹಾರ ನಡೆಸು ತ್ತಿದ್ದಾರೆ. ಆದರೆ, ಗೊಂದಲ – ವಿವಾದದಿಂದ ಜನತೆಗೆ ಮಾರುಕಟ್ಟೆಯ ಪೂರ್ಣ ಪ್ರಯೋಜನ ಸಿಗದಂತಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಸರಕಾರಿ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ (ಪಿಪಿಪಿ ಮಾದರಿ) 115 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೆಂಟ್ರಲ್ ಮಾರ್ಕೆಟ್ ಕಟ್ಟಡ ನಿರ್ಮಿಸಲು 2019 ಡಿಸೆಂಬರ್‌ನ ಪಾಲಿಕೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದರಂತೆ ಅಲ್ಲಿನ ವ್ಯಾಪಾರಿಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಯಿತು. 2020 ಮಾರ್ಚ್ ನಲ್ಲಿ ಕೊರೊನಾ ಲಾಕ್‌ಡೌನ್ ಘೋಷಣೆ ಆದ ಸಂದರ್ಭ ಪಾಲಿಕೆಯು ಎ. 7ರಿಂದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರವನ್ನು ಸ್ಥಗಿತಗೊಳಿಸಿತು. ಈ ಸಂದರ್ಭ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಮಾರ್ಕೆಟ್‌ಗೆ ಸ್ಥಳಾಂತರಿಸಿತು. ಅದರಂತೆ ಸಗಟು ವ್ಯಾಪಾರಿಗಳು ಬೈಕಂಪಾಡಿಯಲ್ಲಿ ವ್ಯವಹಾರ ಆರಂಭಿಸಿದರು. ಆದರೆ ರಿಟೇಲ್ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಅನಂತರ ಪರ್ಯಾಯ ವ್ಯವಸ್ಥೆಗೆ ನೆಹರೂ ಮೈದಾನದ ಬಳಿ 2 ಎಕರೆ ಜಾಗದಲ್ಲಿ 5.5 ಕೋ. ರೂ. ವೆಚ್ಚದಲ್ಲಿ ತಾತ್ಕಾಲಿಕ ಸೆಂಟ್ರಲ್ ಮಾರ್ಕೆಟ್ ಕಟ್ಟಡ ನಿರ್ಮಿಸಲು ಶಿಲಾನ್ಯಾಸ ಮಾಡಿ ಕಾಮಗಾರಿ ಆರಂಭಿಸಲಾಗಿತ್ತು. ಈ 2 ಎಕರೆ ಜಾಗ ವನ್ನು 3 ವಿಭಾಗಗಳಾಗಿ ವಿಂಗಡಿಸಿ ಪುರಭವನ ಹಿಂಭಾಗ/ ಫುಟ್‌ಬಾಲ್ ಮೈದಾನ ಬಳಿ 28 ಮಾಂಸದಂಗಡಿಗಳು, ಇಂದಿರಾ ಕ್ಯಾಂಟೀನ್ ಬಳಿ 48 ಸುಸಜ್ಜಿತ ತರಕಾರಿ- ಹಣ್ಣುಗಳ ಮಳಿಗೆಗಳು, 205 ಸ್ಟಾಲ್‌ಗಳನ್ನು ನಿರ್ಮಿಸಲು, 96 ಇತರೆ ಅಂಗಡಿಗಳನ್ನು ಕ್ರಿಕೆಟ್ ಮೈದಾನದ ಬಲ ಬದಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು.
ಸೆಂಟ್ರಲ್ ಮಾರ್ಕೆಟ್‌ನ ಈಗಿರುವ ಕಟ್ಟಡವನ್ನು ಕೆಡವಿ 115 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹೊಸ ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ನಿರ್ಮಿಸುವ ಬಗ್ಗೆ 2018 ಅಕ್ಟೋಬರ್‌ನಲ್ಲಿಯೇ ಸ್ಮಾರ್ಟ್ ಸಿಟಿ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ, 3 ಬಾರಿ ಟೆಂಡರ್‌ಗಳನ್ನು ಆಹ್ವಾನಿಸಿದ್ದರೂ ಯಾವುದೇ ಬಿಡ್‌ದಾರರು ಆಸಕ್ತಿ ವಹಿಸಿರಲಿಲ್ಲ. ಬಳಿಕ ಷರತ್ತುಗಳಲ್ಲಿ ಕೆಲವು ಬದಲಾವಣೆ ಮಾಡಿ 4ನೇ ಬಾರಿಗೆ ಟೆಂಡರ್ ಆಹ್ವಾನಿಸಿದ್ದು, ಆಸಕ್ತಿ ತೋರಿದ ಬಿಡ್ಡರ್‌ಗೆ ಕಾಮಗಾರಿಯನ್ನು
ವಹಿಸಲಾಗಿದೆ. ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
- ಹಿಲರಿ ಕ್ರಾಸ್ತಾ