Advertisement

ಕೇಂದ್ರದಿಂದ ‘ಬರ’ಸಿಡಿಲು : ಬರ ಘೋಷಣೆಗೆ ಕಠಿಣ ಷರತ್ತು

04:40 AM Jul 19, 2017 | Team Udayavani |

ಬೆಂಗಳೂರು: ಬರಗಾಲಕ್ಕೆ ತುತ್ತಾದರೆ ಕೇಂದ್ರ ಸರಕಾರದಿಂದ ಬರ ಪರಿಹಾರ ಇನ್ನು ಮುಂದೆ ಸಿಗುವುದು ಅಷ್ಟು ಸುಲಭವಲ್ಲ. ಮಳೆಯ ಕೊರತೆಯಿಂದ ರಾಜ್ಯ ಸರಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡು ವುದಕ್ಕೆ ಕಠಿನ ಷರತ್ತುಗಳನ್ನು ವಿಧಿಸಿ ಹೊಸ ನಿಯಮಾವಳಿಗಳನ್ನು ರಚಿಸಿದೆ. ಕೇಂದ್ರದ ಈ ನಿಯಮಗಳನ್ನು ಪಾಲಿಸಿದರೆ, ರೈತರಿಗೆ ಬರ ಪರಹಾರ ಸಿಗುವುದು ಗಗನ ಕುಸುಮವಾಗಲಿದೆ.

Advertisement

ಕೇಂದ್ರ ಸರಕಾರ ಬರ ಪರಿಹಾರಕ್ಕಾಗಿ ರಚಿಸಿರುವ ಮಾರ್ಗಸೂಚಿಗಳು ಅವೈಜ್ಞಾನಿಕವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಹೊಸ ನಿಯಮಾವಳಿಗಳಿಗಳನ್ನು ರಾಜ್ಯ ಸರಕಾರಕ್ಕೆ ಕಳುಹಿಸಿ ಕೊಟ್ಟಿದ್ದು, ಇದರಲ್ಲಿರುವ ನಿಯಮಾವಳಿಗಳನ್ನು ಗಮನಿಸಿದ ರಾಜ್ಯ ಸರಕಾರಕ್ಕೆ ಈಗ ಶಾಕ್‌ ಆಗಿದೆ. ಹೊಸ ನಿಬಂಧನೆಗಳನ್ನು ಅನುಸರಿಸಿದರೆ, ನಿಜವಾಗಿಯೂ ಬರ ಪರಿಸ್ಥಿತಿ ತಲೆದೋರಿದರೂ ಕೇಂದ್ರದಿಂದ ಪರಿಹಾರ ಪಡೆಯುವುದು ದುಸ್ತರವಾಗಲಿದೆ ಎಂದು ಸರಕಾರದ ಉನ್ನತ ಅಧಿಕಾರಿ ಉದಯವಾಣಿಗೆ ತಿಳಿಸಿದ್ದಾರೆ.

ಹೊಸ ನಿಯಮಾವಳಿಯಲ್ಲಿ ಏನಿದೆ ?: ಈ ಹಿಂದೆ 4 ವಾರ ಸತತ ವಾಡಿಕೆಗಿಂತ ಕಡಿಮೆ ಮಳೆ ಬಿದ್ದ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲು ನಿಯಮಗಳಲ್ಲಿ ಅವಕಾಶವಿತ್ತು. ಇದನ್ನು ಮಾರ್ಪಡಿಸಿದ ಕೇಂದ್ರ ಸರಕಾರ ಹೊಸ ನಿಯಮಾವಳಿಯಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಬಿತ್ತನೆಯಾದ ಪ್ರದೇಶವನ್ನು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಲು ಸೂಚಿಸಿದೆ. ಅಷ್ಟೇ ಅಲ್ಲ, ಬರಗಾಲ ಪ್ರದೇಶದಲ್ಲಿ ಕಳೆದ ವರ್ಷಕ್ಕಿಂತ ಅಂತರ್‌ಜಲ ಮಟ್ಟ ಕುಸಿದಿರಬೇಕು, ಜಲಾಶಯ ಮತ್ತು ಕೆರೆಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿರಬೇಕು ಎಂದು ತಿಳಿಸಿದೆ.

ಕರ್ನಾಟಕದಲ್ಲಿ ಮಳೆಯ ಅಸಮತೋಲನ ಇದ್ದು, ಬಿತ್ತನೆ ಸಮಯದಲ್ಲಿ ಬಿದ್ದ ಮಳೆ ಫ‌ಸಲು ಬೆಳೆಯುವಾಗ ಕೈಕೊಟ್ಟು ಎಷ್ಟೋ ಬಾರಿ ಬೆಳೆ ನಾಶಗೊಂಡು ಬರ ಪರಿಸ್ಥಿತಿ ನಿರ್ಮಾಣವಾದ ಚಿತ್ರಣಗಳು ಸಾಕಷ್ಟಿವೆ. ರಾಜ್ಯದಲ್ಲಿ ಹಲವಾರು ವರ್ಷ ಬರಗಾಲ ತಲೆದೋರಿದೆ. ಕಳೆದ 6 ವರ್ಷದಿಂದ ಸತತ ಬರಗಾಲಕ್ಕೆ ರಾಜ್ಯ ತುತ್ತಾದರೂ ಶೇ. 70ರಿಂದ 80ರಷ್ಟು ಬಿತ್ತನೆಯಾಗಿದೆ. ಆದರೆ, ಬಿತ್ತಿದ ಅನಂತರ ಫ‌ಸಲು ಮಾತ್ರ ಕೈ ಸೇರಿಲ್ಲ. ಹೀಗಾಗಿ ಕೇಂದ್ರದ ನಿಯಮಾವಳಿಗಳನ್ನು ಅನ್ವಯಿಸಿ ಬರಗಾಲ ಘೋಷಣೆ ಮಾಡುವುದು ಕಷ್ಟ ಸಾಧ್ಯ.

ಕೇಂದ್ರ ಸರಕಾರ ರಚಿಸಿದ ಹೊಸ ನಿಯಮಾವಳಿಗಳು 2017ರ ಮುಂಗಾರು ಮತ್ತು ಅನಂತರದ ಅವಧಿಗೆ ಅನ್ವಯವಾಗಲಿದೆ. ಈ ಬಾರಿ ಶೇ. 60ರಷ್ಟು ಮಳೆ ವಿಫ‌ಲವಾದಲ್ಲಿ ಮಾತ್ರ ಅಂತಹ ಪ್ರದೇಶಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆಗೆ ಪರಿಗಣಿಸುವಂತೆ ಕೇಂದ್ರ ಸರಕಾರ ನಿಯಮಾವಳಿಯಲ್ಲಿ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಇಲ್ಲಿಯವರೆಗೆ ಶೇ. 33 ಬೆಳೆ ಹಾನಿಯಾಗಿದ್ದರೆ, ಬರ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹೊಸ ನಿಯಮಗಳಲ್ಲಿ ಶೇ. 50ರಷ್ಟು ಬೆಳೆ ಹಾನಿಯಾದರೆ ಮಾತ್ರ ಪರಿಹಾರಕ್ಕೆ ಪರಿಗಣಿಸುವಂತೆ ಸೂಚಿಸಲಾಗಿದೆ.

Advertisement

ಬರ ಘೋಷಣೆಗೆ ಹೊಸ ನಿಮಯ
– ಶೇ. 50ಕ್ಕಿಂತ ಕಡಿಮೆ ಬಿತ್ತನೆಯಾಗಿರಬೇಕು.
– ಶೇ. 60ರಷ್ಟು ಮಳೆ ಕಡಿಮೆಯಾಗಿರಬೇಕು.
– ಅಂತರ ಜಲ ಮಟ್ಟ ಕುಸಿದಿರಬೇಕು.
– ಜಲಾಶಯಗಳು ಮತ್ತು ಕೆರೆಗಳ ನೀರಿನ ಪ್ರಮಾಣ ಕಡಿಮೆಯಾಗಿರಬೇಕು.
– ಶೇ. 50ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರಬೇಕು.
– ಬರ ಪೀಡಿತ ಪ್ರದೇಶದ ಶೇ. 10ರಷ್ಟು  ಸಮೀಕ್ಷೆ ಫೋಟೊ ತೆಗೆದು ಕಳುಹಿಸಬೇಕು.

ಹಳೆ ನಿಯಮಗಳು
– ಸತತ ನಾಲ್ಕು ವಾರ ವಾಡಿಕೆಗಿಂತ ಕಡಿಮೆ ಮಳೆ
– ಶೇ. 33ರಷ್ಟು ಬೆಳೆ ಹಾನಿಯಾದರೂ ಪರಿಹಾರ
– ಶೇ. 50 ಮಣ್ಣಿನ ತೇವಾಂಶ ಕಡಿಮೆ ಇರಬೇಕು.

ಕೇಂದ್ರ ಸರಕಾರದ ಹೊಸ ಮಾರ್ಗಸೂಚಿ ಪ್ರಕಾರ ಬರ ಘೋಷಣೆ ಮಾಡುವುದು ಕಷ್ಟವಾಗಲಿದೆ. ಯಾವ ರಾಜ್ಯವೂ ಈ ನಿಯಮದಡಿ ಬರ ಘೋಷಣೆಗೆ ಅವಕಾಶ ದೊರೆಯುವುದು ಅನುಮಾನ. ತೀವ್ರ ಬರಗಾಲವಿದ್ದರೆ ಮಾತ್ರ ಅದನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕೆಂದು ಹೇಳಲಾಗಿದೆ. ಇದನ್ನು ಅನುಸರಿಸಿದರೆ, ಕೇಂದ್ರದಿಂದ ಬರ ಪರಿಹಾರ ದೊರೆಯುವುದು ಕಷ್ಟ’.
– ಬಿ.ಎಸ್‌. ಶ್ರೀನಿವಾಸ ರೆಡ್ಡಿ, ನಿರ್ದೇಶಕರು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next