ಬೆಂಗಳೂರು: ಕನ್ನಡ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕನ್ನಡ ಸಂಘರ್ಷ ಸಮಿತಿ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಸಮಿತಿಯ 40ನೇ ವಾರ್ಷಿಕೋತ್ಸವ ಮತ್ತು ವಿಚಾರ ಸಂಕಿರಣ ಸಮಾರಂಭದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ತಮಿಳು ಭಾಷೆ ಅಭಿವೃದ್ಧಿ ಕಾರ್ಯಕ್ಕೆ ನೀಡುವ ಹಣ ಕನ್ನಡಕ್ಕೆ ನೀಡುತ್ತಿಲ್ಲ. ಶಾಸ್ತ್ರೀಯ ಸ್ಥಾನಮಾನ ಪಡೆದಿದ್ದರೂ, ಶಾಸ್ತ್ರೀಯ ವಿಭಾಗ ರಾಜ್ಯದಲ್ಲಿರದೇ ಕೇಂದ್ರದ ಅಂಗಳಲ್ಲಿದೆ. ಅಲ್ಲಿನ ಯೋಜನಾ ವಿಭಾಗದ ನಿರ್ದೇಶಕ ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದು, ವರ್ಷದಲ್ಲಿ ಎರಡ್ಮೂರು ಕಾರ್ಯಕ್ರಮ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ನಾಮಕಾವಾಸ್ತೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದೆ ಎಂದು ತಿಳಿಸಿದರು.
ರಾಜಕಾರಣಿಗಳು ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ನಿರ್ಣಯ ಕೈಗೊಳ್ಳುತ್ತಿದ್ದು, ಭಾಷೆ ನಶಿಸುವ ಸ್ಥಿತಿಗೆ ತಂದಿದ್ದಾರೆ. ಇಂಗ್ಲಿಷ್ ಶಿಕ್ಷಣ ನೀಡುವುದಾಗಿ ಹೇಳಿ ಮಕ್ಕಳನ್ನು ಎಡಬಿಡಂಗಿಯಾಗಿಸುತ್ತಿದ್ದಾರೆ. ಓಟ್ ಬ್ಯಾಂಕ್‌ಗಾಗಿ ಇಂಗ್ಲಿಷ್ ಶಾಲೆ ತೆರೆಯುವುದಾಗಿ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ ಎಂದು ಆರೋಪಿಸಿದರು.
ಸ್ವಾತಂತ್ರದಿಂದಲೂ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಪರಿಣಾಮಕಾರಿಯಾಗಿ ಆಗುತ್ತಿರಲಿಲ್ಲ. ಆದರೆ, 2014ರಿಂದ ಹಿಂದಿ ಹೇರಿಕೆ ಹೆಚ್ಚಾಗಿದೆ. ಇದರಿಂದ ಕನ್ನಡಿಗರು ಉದ್ಯೋಗದಿಂದ ವಂಚಿತರಾಗಿದ್ದಾರೆ. ರಾಜ್ಯದ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದ್ದು, ಒಕ್ಕೂಟ ವ್ಯವಸ್ಥೆಗೆ ದೊಡ್ಡ ಪೆಟ್ಟಾಗಿದೆ. ಕನ್ನಡಿಗರ ಕೀಳರಿಮೆಯಿಂದ ಭಾಷೆ ಕುಂಟುತ್ತಾ ಸಾಗಿದೆ ಎಂದರು.
ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ ಮಾತನಾಡಿ, ಕನ್ನಡ ಭಾಷೆಗೆ 3 ಸಾವಿರ ವರ್ಷ, ಸಾಹಿತ್ಯಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಪ್ರಸ್ತುತ ಕನ್ನಡ ಕನ್ನಡಿಗರಿಂದ ದೂರವಾಗುತ್ತಿದೆಯೇ ಹಾಗೂ ಕನ್ನಡಿಗರು ಕನ್ನಡದಿಂದ ದೂರವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಆದರೂ, ಕನ್ನಡ ಶಕ್ತಿ ಕಳೆದುಕೊಂಡಿಲ್ಲ ಎಂದು ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್, ಬಿಬಿಎಂಪಿ ಮಾಜಿ ಸದಸ್ಯ ಎ.ಎಚ್. ಬಸವರಾಜ್, ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಗಂಗಾಧರ್, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಇತರರು ಹಾಜರಿದ್ದರು.