ಚಿಕ್ಕಬಳ್ಳಾಪುರ: ಇಡೀ ರಾಷ್ಟ್ರದಲ್ಲಿಯೇ ಪ್ರಧಾನವಾಗಿ ಬೆಳೆಯುವ ಜಿಲ್ಲೆಯ ಗುಲಾಬಿ ಈರುಳ್ಳಿ ರಫ್ತು ಮೇಲೆ ಕೇಂದ್ರ ಸರ್ಕಾರ ಹೇರಿದ್ದ ನಿಷೇಧ ಕೊನೆಗೂ ಜಿಲ್ಲೆಯ ರೈತರ ಒತ್ತಾಯಕ್ಕೆ ಮಣಿದು ಹಿಂಪಡೆದಿದ್ದು, ಗುಲಾಬಿ ಈರುಳ್ಳಿ ಬೆಳೆಗಾರರಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಸಂತಸ ತಂದಿದೆ. ದೇಶದಲ್ಲಿ ಕೆಲ ತಿಂಗಳ ಹಿಂದೆ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ಮೇಲೆ ನಿಷೇಧ ಹೇರಿತ್ತು. ಇದರಿಂದ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುಲಾಬಿ ಈರುಳ್ಳಿ ಬೆಳೆಯುವ ರೈತರು ತಲ್ಲಣಗೊಂಡು ಆತಂಕಕ್ಕೆ ಒಳಗಾಗಿದ್ದರು.
ಒತ್ತಡಕ್ಕೆ ಮಣಿದ ಕೇಂದ್ರ: ಬರೀ ರಫ್ತು ನಂಬಿಕೊಂಡೇ ಲಕ್ಷಾಂತರ ರೂ. ಬಂಡವಾಳ ಹಾಕಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕೆಂಪು ಗುಲಾಬಿ ಈರುಳ್ಳಿ ಬೆಳೆದಿದ್ದ ಜಿಲ್ಲೆಯ ರೈತರು ಕೇಂದ್ರ ಸರ್ಕಾರದ ರಫ್ತು ಮೇಲೆ ಹೇರಿದ ನಿಷೇಧದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೈ ಸುಟ್ಟುಕೊಳ್ಳುವ ಆಂತಕದಲ್ಲಿದ್ದರು. ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಿದ್ದರ ಜೊತೆಗೆ ಜಿಲ್ಲೆಯ ರೈತರ ಬೇಡಿಕೆಗೆ ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹೇರಿದ್ದರಿಂದ ಕೊನೆಗೂ ರಫ್ತು ಮೇಲಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ಸೋಮವಾರ ಹಿಂಪಡೆದಿದೆ.
ದೇಶದಲ್ಲಿ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಾತ್ರ ಗುಲಾಬಿ ಈರುಳ್ಳಿಯನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಈ ಈರುಳ್ಳಿ ಶ್ರೀಲಂಕಾ, ಮಲೇಷಿಯಾ, ಸಿಂಗಾಪುರ ದೇಶಗಳಿಗೆ ಈ ಜಿಲ್ಲೆಗಳಿಂದ ನೇರವಾಗಿ ರಫ್ತು ಆಗುತ್ತದೆ. ಆದರೆ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ತಡೆಯಲು ರಫ್ತು ಮೇಲೆ ನಿಷೇಧ ಹೇರಿದ್ದ ಪರಿಣಾಮ ಸಹಜವಾಗಿಯೇ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುಲಾಬಿ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದರು.
ಕೊಯ್ಲಿಗೆ ಬಂದಿರುವ ಈರುಳ್ಳಿಯನ್ನು ಏನು ಮಾಡಬೇಕು ಎಂಬ ಆತಂಕದಲ್ಲಿ ರೈತರು ಇದ್ದರು. ಆದರೆ ಜಿಲ್ಲೆಯ ಬೆಳೆಗಾರರು, ರಾಜ್ಯದ ಮೂಲಕ ಕೇಂದ್ರದ ಮೇಲೆ ನಿರಂತರವಾಗಿ ಒತ್ತಡ ಹೇರಿದ ಪರಿಣಾಮ ಕೇಂದ್ರ ಸರ್ಕಾರ ನಿಷೇಧ ಹೇರಿದ ತಿಂಗಳಿಗೆ ಕೆಂಪು ಗುಲಾಬಿ ಈರುಳ್ಳಿ ಮೇಲಿನ ನಿಷೇಧ ಮಾತ್ರ ಹಿಂಪಡೆದಿದೆ.
ಪ್ರತಿ ವರ್ಷ ಎರಡು ಬೆಳೆ ತೆರೆಯುವ ರೈತರು ಮಾರ್ಚ್‌ನಲ್ಲಿ ಆರಂಭಿಸಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಬೆಳೆ ತೆಗೆದರೆ ಮತ್ತೂಂದು ಬೆಳೆ ಆಗಸ್ಟ್‌ನಲ್ಲಿ ಆರಂಭಿಸಿ ಸೆಪ್ಟೆಂಬರ್‌ನಲ್ಲಿ ಕಟಾವು ಮಾಡುತ್ತಾರೆ. ವಿಶೇಷವಾಗಿ ಅವಳಿ ಜಿಲ್ಲೆಯ ಹವಾಮಾನಕ್ಕೆ ಮಾತ್ರ ಈ ಗುಲಾಬಿ ಈರುಳ್ಳಿ ಬೆಳೆಯುವುದರಿಂದ ಎರಡು ಜಿಲ್ಲೆಗಳಲ್ಲಿ ಸಾವಿರಾರು ರೈತರು ಬರದ ನಡುವೆಯು ತಮ್ಮಲ್ಲಿನ ಕೊಳವೆ ಬಾವಿಗಳಿಂದ ಬರುವ ಅಲ್ಪಸ್ವಲ್ಪ ನೀರು ನಂಬಿಕೊಂಡು ಲಕ್ಷಾಂತರ ರೂ. ಬಂಡವಾಳ ಹಾಕಿ ಈರುಳ್ಳಿ ಬೆಳೆ ಬೆಳೆಯುತ್ತಾರೆ.
ಜನಪ್ರತಿನಿಧಿಗಳ ಕಣ್ಣು ತೆರೆಸಿದ್ದ ವರದಿ: ಕೆಂಪು ಗುಲಾಬಿ ಈರುಳ್ಳಿ ಬೆಳೆಯುವ ಬೆಳೆಗಾರರು ಕೇಂದ್ರ ಸರ್ಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಒಳಗಾಗಿರುವ ಬಗ್ಗೆ ಮೊದಲಿಗೆ ಚಿಕ್ಕಬಳ್ಳಾಪುರ “
ಉದಯವಾಣಿ’ ಆವೃತ್ತಿಯಲ್ಲಿ ಕಳೆದ ಅ.1 ರಂದು “ಅವಳಿ ಜಿಲ್ಲೆಯ ಗುಲಾಬಿ ಈರುಳ್ಳಿ ಬೆಳೆಗಾರರು ತಲ್ಲಣ” ಶೀರ್ಷಿಕೆಯಡಿ ರಫ್ತು ಮೇಲೆ ಹೇರಿರುವ ನಿಷೇಧದಿಂದ ಆಗುವ ಸಂಕಷ್ಟದ ಬಗ್ಗೆ ಸಮಗ್ರವಾಗಿ ವರದಿ ಪ್ರಕಟಿಸಿ ಜನಪ್ರತಿನಿಧಿಗಳ ಕಣ್ಣು ತೆರೆಸಿತ್ತು.
ಕೇಂದ್ರ ಸರ್ಕಾರ ಜಿಲ್ಲೆಯ ಗುಲಾಬಿ ಈರುಳ್ಳಿ ಬೆಳೆಗಾರರ ಸಂಕಷ್ಟ ಅರಿತು ರಫ್ತು ಮೇಲೆ ಹೇರಿದ್ದ ನಿಷೇಧ ವಾಪಸು ಪಡೆದಿರುವುದು ಸಂತಸ ತಂದಿದೆ. ಇದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಸ್ರಾರು ರೈತರಿಗೆ ಅನುಕೂಲವಾಗಲಿದೆ. ರೈತರ ಬೇಡಿಕೆಗೆ ಸ್ಪಂದಿಸಿದ ಎರಡು ಜಿಲ್ಲೆಗಳ ಸಂಸದರಿಗೆ, ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.
-ಶಿವಣ್ಣ, ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ