Advertisement

Central Governmnet: ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಜಿಲ್ಲೆಯ ಬ್ಯಾಂಕ್‌ಗಳ ಹಿನ್ನಡೆ

01:25 AM Sep 11, 2024 | Team Udayavani |

ಮಂಗಳೂರು: ಕೇಂದ್ರ ಪುರಸ್ಕೃತ “ಮುದ್ರಾ’, ಪ್ರಧಾನ ಮಂತ್ರಿ ಜೀವನ್‌ಜ್ಯೋತಿ ವಿಮಾ, ಪಿಎಂ ಸ್ವನಿಧಿ ಸಹಿತ ಹಲವು ಯೋಜನೆಗಳಲ್ಲಿ ಜಿಲ್ಲೆಯ ಅನೇಕ ಬ್ಯಾಂಕ್‌ಗಳು ಹಿಂದುಳಿದಿರುವುದು ಮಂಗಳವಾರ ನಡೆದ ಬ್ಯಾಂಕಿಂಗ್‌ ಸಲಹಾ ಸಮಿತಿ ಸಭೆಯಲ್ಲಿ ಬಹಿರಂಗಗೊಂಡಿದೆ.

Advertisement

ಸ್ಟಾಂಡ್‌ ಅಪ್‌ ಇಂಡಿಯಾ ಯೋಜನೆಯಲ್ಲಿ ಜಿಲ್ಲೆಗೆ 1,300 ಗುರಿ ಇದ್ದರೂ 8 ಅರ್ಜಿಗಳಷ್ಟೇ ಬಂದಿರುವ ಬಗ್ಗೆ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಅಚ್ಚರಿ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ಗುರಿ ಹಾಕುವಾಗಲೇ ಜಿಲ್ಲೆಯಲ್ಲಿ ಇಷ್ಟು ಬರಬಹುದು ಎಂಬ ಚರ್ಚೆ ನಡೆದಿರುತ್ತದೆ, ಆದರೆ ಶೇ. 50ರಷ್ಟಾದರೂ ಅರ್ಜಿ ಬಾರದಿರುವುದಕ್ಕೆ ಕಾರಣವೇನು? ಯೋಜನೆಯ ಬಗ್ಗೆ ಜನರಿಗೆ ಯಾಕೆ ಆಸಕ್ತಿ ಇಲ್ಲ? ಅಥವಾ ಬ್ಯಾಂಕ್‌ಗಳ ನಿರಾಸಕ್ತಿಯೇ ಎನ್ನುವುದರ ಬಗ್ಗೆ ಮಾಹಿತಿ ಒದಗಿಸುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು.

ಸ್ಟಾಂಡ್‌ ಅಪ್‌ ಇಂಡಿಯಾದಂತಹ ಕಾರ್ಯಕ್ರಮಗಳಲ್ಲಿ ಇತರ ಯೋಜನೆಗಳಲ್ಲಿ ಹೆಚ್ಚಿನ ಪ್ರಯೋಜನವಿರುವಾಗ ಅದಕ್ಕೇ ಜನ ಹೋಗುತ್ತಾರೆ. ಮುದ್ರಾ ಸಾಲ ಯೋಜನೆಯಲ್ಲಿ ಸೆಕ್ಯೂರಿಟಿ ಇರಿಸಬೇಕಾದ ಪ್ರಮೇಯವಿಲ್ಲ ಎನ್ನುವುದು ಬಿಟ್ಟರೆ ಹೆಚ್ಚಿನ ಪ್ರಯೋಜನವಿಲ್ಲ ಎನ್ನುವ ಕಾರಣವಿರಬಹುದು ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದರು. ಉಳಿತಾಯ ಖಾತೆ ಹೊಂದಿರು ವವರನ್ನೇ ಮನವೊಲಿಸಿ, ಅವರಿಗೆ ಜೀವ ವಿಮೆ ಹಾಗೂ ಅಪಘಾತ ವಿಮೆ ಒದಗಿಸುವ ಜೀವನ್‌ಜ್ಯೋತಿ ಉತ್ತಮ ಯೋಜನೆಯಾಗಿದ್ದು, ಅದರಲ್ಲಿ ಕೆಲವೊಂದು ಬ್ಯಾಂಕ್‌ಗಳು ಶೂನ್ಯ ಸಾಧನೆ ಮಾಡಿರುವುದರ ಬಗ್ಗೆ ಜಿ. ಪಂ. ಸಿಇಒ ಡಾ| ಆನಂದ್‌ ಅಸಮಾಧಾನ ವ್ಯಕ್ತಪಡಿಸಿದರು.

ಪಿಎಂ ಸ್ವನಿಧಿಗೆ ನೆರವಾಗಿ: ಪಿಎಂ ಸ್ವನಿಧಿ ಯೋಜನೆಯನ್ನು ಬೀದಿ ಬದಿ ವ್ಯಾಪಾರಿಗಳಿಗೆ ವಿನ್ಯಾಸ ಪಡಿಸಲಾಗಿದೆ, ಅಂತಹವರು ಬ್ಯಾಂಕ್‌ ಮೆಟ್ಟಿಲೇರಲು ಹೆದರುತ್ತಾರೆ, ಅವರಿಗೆ ಮನಪಾ ಅಧಿಕಾರಿಗಳು ನೆರವಾಗಬೇಕು ಎಂದು ಸಂಸದ ಚೌಟ ಸೂಚಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮನಪಾ ಅಧಿಕಾರಿ, ಕೆಲವೊಮ್ಮೆ ಬ್ಯಾಂಕ್‌ ಶಾಖೆಗಳಿಗೆ 2-3 ಬಾರಿ ಹೋದರೂ ಬ್ಯಾಂಕ್‌ಗಳಿಂದ ಸರಿಯಾದ ಸ್ಪಂದನೆ ಇಲ್ಲದ ಕಾರಣ ಜನ ಬರುತ್ತಿಲ್ಲ ಎಂದರು. ಒಂದು ವೇಳೆ ಬ್ಯಾಂಕ್‌ಗಳು ಸಮಸ್ಯೆ ಮಾಡಿದರೆ, ಅದರ ಕುರಿತು ಲಿಖೀತವಾಗಿ ಮಾಹಿತಿ ನೀಡಿ ಎಂದು ಚೌಟ ಹೇಳಿದರು.

ಪಿಎಂಇಜಿಪಿಯಡಿ ಸಬ್ಸಿಡಿಗೆ ವಿಳಂಬ
ಪಿಎಂ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ದಡಿ ಕಿರು ಮತ್ತು ಮಧ್ಯಮ ಕೈಗಾರಿಕಾ ಚಚುವಟಿಕೆಗಳಿಗೆ ಸಾಲ ಪಡೆದು ಮರುಪಾವತಿಸಿದ್ದರೂ ನೂರಾರು ಉದ್ದಿಮೆದಾರರಿಗೆ ಸಿಗಬೇಕಾಗಿರುವ ಸಬ್ಸಿಡಿ ಹಲವು ವರ್ಷಗಳಿಂದ ದೊರೆತಿಲ್ಲ ಎಂಬ ಮಾಹಿತಿ ಬಗ್ಗೆ ಸಂಸದರು ಕಳವಳ ವ್ಯಕ್ತಪಡಿಸಿದರು. 2019ರಿಂದೀಚೆಗೆ ಪಿಎಂಇಜಿಪಿಯಡಿ ಸಾಲ ಪಡೆದವರು ಮರುಪಾವತಿ ಮಾಡಿದ್ದರೂ ಸಬ್ಸಿಡಿ ದೊರಕಿಲ್ಲ. ಇದರಿಂದಾಗಿ ಈ ಉದ್ದಿಮೆದಾರರು ಬೇರೆ ಯಾವುದೇ ರೀತಿಯ ಸಾಲ ಪಡೆಯಲು ಸಾಧ್ಯವಾಗದೆ ಉದ್ಯಮವನ್ನೇ ಮುಚ್ಚುವಂತಹ ಸ್ಥಿತಿ ಎದುರಾಗಿದೆ ಎಂಬ ಮಾಹಿತಿ ಸಭೆಯಲ್ಲಿ ಕೇಳಿಬಂತು.

Advertisement

ಸಾಲ ಪಡೆಯುವ ಉದ್ದಿಮೆದಾರರಿಗೆ ಅವರ ಖಾತೆಗೆ ಸಬ್ಸಿಡಿ ಹಣವನ್ನು ವರ್ಗಾಯಿಸಲಾಗುತ್ತದೆ. ಆದರೆ ಸಾಲ ಮರುಪಾವತಿ ಬಳಿಕ ತೃತೀಯ ಪಕ್ಷೀಯ ಪರಿಶೀಲನೆ ಆಗಬೇಕಾಗುತ್ತದೆ. ಹಿಂದೆ ಜೆನೆಸಿಸ್‌ ಸಂಸ್ಥೆ ನಡೆಸುತ್ತಿದ್ದ ಪರಿಶೀಲನೆಯನ್ನು ಇದೀಗ ಕೇಂದ್ರ ಸರಕಾರವು ಅಂಚೆ ಇಲಾಖೆಗೆ ವರ್ಗಾಯಿಸಿದೆ. ಎಲ್ಲ ರಾಜ್ಯಗಳಲ್ಲೂ ಇದೀಗ ಈ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿದ್ದು ಇದರಿಂದಾಗಿ ಸಬ್ಸಿಡಿ ವಿತರಣೆ ವಿಳಂಬವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸಹಾಯಕ ವ್ಯವಸ್ಥಾಪಕ ಅನಿಲ್‌ಕುಮಾರ್‌ ಮಾಹಿತಿ ನೀಡಿದರು.

ಶೇ.14ರಷ್ಟು ಬೆಳವಣಿಗೆ: ಜಿಲ್ಲೆಯ ಬ್ಯಾಂಕ್‌ಗಳು ಜೂನ್‌ ಅಂತ್ಯಕ್ಕೆ ಒಟ್ಟು ವ್ಯವಹಾರ 1,22,649.22 ಕೋಟಿ ರೂ. ದಾಖಲಿಸಿದ್ದು ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಲ್ಲಿ ಶೇ.14.92ರಷ್ಟು ಬೆಳವಣಿಗೆ ಸಾಧಿಸಿವೆ. ಒಟ್ಟು ಠೇವಣಿ 70,806 ಕೋಟಿ ರೂ. ಹಾಗೂ ಒಟ್ಟು ಸಾಲ 51,843.10 ಕೋಟಿ ರೂ. ಆಗಿದೆ.
ಕೃಷಿ ಕ್ಷೇತ್ರಕ್ಕೆ ತ್ತೈಮಾಸಿಕ ಗುರಿಯಾದ 3782.42 ಕೋಟಿ ರೂ.ರಲ್ಲಿ 3032.01 ಕೋಟಿ ರೂ. ವಿತರಿಸಲಾಗಿದೆ. ಅದೇ ರೀತಿ ಎಂಎಸ್‌ಎಂಇ (ಸಣ್ಣ, ಅತಿ ಸಣ್ಣ , ಮಧ್ಯಮ ಉದ್ಯಮ) ತ್ತೈಮಾಸಿಕ ಗುರಿಯಾದ 2003.93 ರೂ. ಇದ್ದರೆ 3282.42 ಕೋಟಿ ರೂ. ಗುರಿ ಸಾಧಿಸಲಾಗಿದೆ.
ಭಾರತೀಯ ರಿಸರ್ವ್‌ ಬ್ಯಾಂಕ್‌ನ ಎಜಿಎಂ ಅರುಣ್‌ ಕುಮಾರ್‌, ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಕವಿತಾ ಶೆಟ್ಟಿ ಉಪಸ್ಥಿತರಿದ್ದರು.

ಗುರಿ ಮೀರಿದ ಸಾಧನೆಯ ಹಿಂದೆ…??
ಜಿಲ್ಲಾ ಸಾಲ ಯೋಜನೆಗಳಲ್ಲಿ ಯಾವಾಗಲೂ ದ.ಕ. ಗುರಿ ಮೀರಿದ ಸಾಧನೆ ಮಾಡುತ್ತಿದೆ, ಆದರೆ ಕೆಲವೊಮ್ಮೆ ಹೊರ ಜಿಲ್ಲೆಯವರಿಗೂ ಇಲ್ಲಿ ಸಾಲ ನೀಡಲಾಗುತ್ತಿದ್ದು, ಅದನ್ನೂ ಸೇರಿಸಿರುವ ಕಾರಣ ಇದು ನಡೆಯುತ್ತಿರಬಹುದು ಎಂದು ನಬಾರ್ಡ್‌ ಡಿಜಿಎಂ ಸಂಗೀತಾ ಕರ್ತ ಹೇಳಿದರು.
ಆದಷ್ಟೂ ಸಾಲ ನೀಡಿಕೆಯಿಂದ ದ.ಕ. ಜಿಲ್ಲೆಯೊಳಗೇ ಆಸ್ತಿಯ ಸೃಷ್ಟಿಯಾಗಬೇಕು, ಹೊರ ಜಿಲ್ಲೆಯವರಿಗೆ ಕೊಡಬಾರದು ಎಂದಿಲ್ಲ, ಆದರೆ ಅದನ್ನು ಸಾಲ ಯೋಜನೆ ವ್ಯಾಪ್ತಿಯೊಳಗೆ ತೋರಿಸದಿರುವುದು ಉತ್ತಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next