ಬೆಂಗಳೂರು: ಕೋವಿಡ್ ಸೇನಾನಿಗಳ ಮೇಲಿನ ಹಲ್ಲೆ ತಪ್ಪಿಸುವ ಸಲುವಾಗಿ ಕೇಂದ್ರ ಸರಕಾರವು ತಂದಿರುವ ಅಧ್ಯಾದೇಶವೇ ಅಂತಿಮ, ರಾಜ್ಯ ಸರಕಾರದ್ದಲ್ಲ ಎಂದು ಹೈಕೋರ್ಟ್‌ಗೆ ಕೇಂದ್ರ ಸರಕಾರದ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದ್ದಾರೆ.
ಕೋವಿಡ್ ಸೇನಾನಿಗಳ ಮೇಲೆ ಹಲ್ಲೆಗಳನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಅಧ್ಯಾದೇಶ ತಂದಿದ್ದವು. ಕೇಂದ್ರದ ಅಧ್ಯಾದೇಶಕ್ಕೆ ಹೋಲಿಸಿದರೆ, ರಾಜ್ಯದ್ದು ದುರ್ಬಲವಾಗಿತ್ತು. ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಲಾಗಿತ್ತು.
ಮಂಗಳವಾರ ನಡೆದ ವಿಚಾರಣೆಯ ವೇಳೆ ಲಿಖಿತ ಹೇಳಿಕೆ ಸಲ್ಲಿಸಿದ ಕೇಂದ್ರದ ಪರ ವಕೀಲರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಧ್ಯಾದೇಶಗಳಲ್ಲಿ ಸಾಮ್ಯತೆ ಇಲ್ಲದೆ ಹೋದರೆ, ಆಗ ರಾಜ್ಯ ಸರಕಾರದ ಅಧ್ಯಾದೇಶ ಮಾನ್ಯತೆ ಕಳೆದುಕೊಳ್ಳಲಿದೆ ಎಂದರು.
ಅಷ್ಟೇ ಅಲ್ಲ, ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಸರಕಾರಗಳು ಪ್ರತ್ಯೇಕ ಅಧ್ಯಾದೇಶ ತರುವಂತೆಯೂ ಇಲ್ಲ ಎಂದೂ ಹೇಳಿದ್ದಾರೆ. ರಾಜ್ಯದ ಅಧ್ಯಾದೇಶ ಪ್ರಶ್ನಿಸಿ ವಕೀಲ ಜಿ.ಆರ್. ಮೋಹನ್ ಪಿಐಎಲ್ ಸಲ್ಲಿಸಿದ್ದರು. ಈ ಸಂಬಂಧ ಮುಖ್ಯ ನ್ಯಾ| ಎ.ಎಸ್. ಓಕಾ ಮತ್ತು ನ್ಯಾ| ಬಿ.ವಿ. ನಾಗರತ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಕೇಂದ್ರದ ಪರ ವಕೀಲರಾದ ಎಂ.ಎನ್. ಕುಮಾರ್ ನ್ಯಾಯಪೀಠಕ್ಕೆ ಮೆಮೋ ಸಲ್ಲಿಸಿದರು. ಜತೆಗೆ ಈಗ ಸಲ್ಲಿಸಿರುವ ಲಿಖಿತ ಹೇಳಿಕೆ ಪ್ರಾಥಮಿಕ ವಾದವಷ್ಟೇ ಆಗಿದ್ದು, ವಿವರವಾದ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಕೋರಿದರು. ನ್ಯಾಯಪೀಠ ವಿಚಾರಣೆಯನ್ನು ಮೇ 28ಕ್ಕೆ ಮುಂದೂಡಿತು.
ಕೇಂದ್ರದ ಅಧ್ಯಾದೇಶ
1. ಕೋವಿಡ್ ಸೇನಾನಿಗಳ ಮೇಲಿನ ಹಲ್ಲೆ ಸಂಜ್ಞೇಯ (ಕಾಗ್ನಿಜೆಬಲ್) ಮತ್ತು ಜಾಮೀನುರಹಿತ ಅಪರಾಧ
2. ದಂಡ ಸಹಿತ ಏಳು ವರ್ಷ ಕಠಿನ ಶಿಕ್ಷೆ
ರಾಜ್ಯದ ಅಧ್ಯಾದೇಶ
1. ಅಸಂಜ್ಞೇಯ (ನಾನ್ ಕಾಗ್ನಿಜೆಬಲ್) ಅಪರಾಧ ಕೃತ್ಯ, ಜಾಮೀನಿದೆ
2. ತಪ್ಪಿತಸ್ಥರಿಗೆ ಮೂರು ವರ್ಷ ಶಿಕ್ಷೆ, 50 ಸಾವಿರ ದಂಡ