Advertisement
ಒಂದು ಸಾಲ ತೆಗೆದುಕೊಳ್ಳಲು ಹೋಗಬೇಕು ಎಂದರೆ, ಕನಿಷ್ಠ 100 ಪುಟದ ಕಾಗದ ಪತ್ರಗಳಾದರೂ ವರ್ಗಾವಣೆಯಾಗುತ್ತವೆ. ಸಾಲಗಾರರು ತಮ್ಮ ದಾಖಲೆಗಳನ್ನೆಲ್ಲ ಫೋಟೋ ಕಾಪಿ ತೆಗೆದು ಬ್ಯಾಂಕಿಗೆ ಕೊಡಬೇಕು. ಬ್ಯಾಂಕ್ ಕಡಿಮೆಯೆಂದರೂ 40 50 ಪುಟಗಳ ದಾಖಲೆಗಳಿಗೆ ಸಹಿ ಮಾಡಿಸಿಕೊಳ್ಳುತ್ತದೆ. ಬ್ಯಾಂಕ್‌ನಿಂದ ಸಾಲ ಪಡೆಯುವುದು ನಿಜಕ್ಕೂ ದೀರ್ಘಾವಧಿಯ ಕಾರ್ಯಕ್ರಮ. ನಮ್ಮ ಕೆಲಸವನ್ನೆಲ್ಲ ಬಿಟ್ಟು ಬ್ಯಾಂಕಿಗೆ ಹೋಗಬೇಕು. ಅಲ್ಲಿ ಗಂಟೆಗಟ್ಟಲೆ ಕಾದು, ಅಲ್ಲಿನ ಎಕ್ಸಿಕ್ಯೂಟಿವ್‌ಗಳಿಗೆ ದಾಖಲೆ ನೀಡಬೇಕು. ಪ್ರತಿ ಬ್ಯಾಂಕ್‌ಗಳು, ಪ್ರತಿ ಸಾಲಗಾರನೂ ಇಷ್ಟೂ ಕೆಲಸವನ್ನು ಮಾಡಲೇಬೇಕು. ಈಗ ಡಿಜಿಟಲ್ ವ್ಯವಸ್ಥೆ ಬಂದಿದೆ. ಆದರೂ ನಾವು ಯಾಕೆ ಈ ಅಪ್ಪ ನೆಟ್ಟ ಆಲದ ಮರಕ್ಕೇ ಜೋತು ಬೀಳುತ್ತೇವೆ ಎಂಬ ಪ್ರಶ್ನೆ ಬಂದಾಗಲೇ ಸರಕಾರ ಹೊಸದೊಂದು ವ್ಯವಸ್ಥೆಯನ್ನು ರೂಪಿಸಲು ಹೆಜ್ಜೆ ಇಟ್ಟಿದೆ.
Related Articles
Advertisement
ಆದರೆ, ಇದರಲ್ಲಿ ಬ್ಯಾಂಕ್ ಖಾತೆಯ ವಿವರಗಳು ಅಂದರೆ ನಮ್ಮ ಬ್ಯಾಂಕ್ ಖಾತೆಯ ಆನ್‌ಲೈನ್ ಪಾಸ್‌ವರ್ಡ್‌ಗಳಾಗಲಿ ಅಥವಾ ನಮ್ಮ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆಯ ಅವಕಾಶವನ್ನಾಗಲಿ ನೀಡುವುದಿಲ್ಲ. ಬದಲಿಗೆ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮಾತ್ರ ಸಿಗುತ್ತವೆ. ಅದೇ ರೀತಿ, ವಿಮೆ ಹಾಗೂ ಮ್ಯೂಚುವಲ್ ಫಂಡ್‌ಗಳ ವಿಚಾರದಲ್ಲೂ ಕೂಡ. ಎಷ್ಟು ಮೊತ್ತದ ಯಾವ ವಿಮೆಯನ್ನು ನಾವು ಹೊಂದಿದ್ದೇವೆ ಮತ್ತು ಯಾವ ಕಂಪೆನಿಯ ಎಷ್ಟು ಮೊತ್ತದ ಮ್ಯೂಚುವಲ್ ಫಂಡ್‌ಗಳನ್ನು ನಾವು ಹೊಂದಿದ್ದೇವೆ ಎಂಬ ವಿವರ ಮಾತ್ರ ಇದರಲ್ಲಿರುತ್ತದೆ. ಇದೇ ರೀತಿ, ಯಾವ ಮಾಹಿತಿಯನ್ನು ನಾವು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಕು ಎಂಬುದನ್ನೂ ನಾವೇ ನಿರ್ಧರಿಸಬಹುದು. ಅಷ್ಟೇ ಅಲ್ಲ, ಎಷ್ಟು ದಿನಗಳವರೆಗೆ ನಮ್ಮ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂಬುದನ್ನೂ ನಿರ್ಧರಿಸಬಹುದು. ಹೀಗಾಗಿ ಇದರಲ್ಲಿ ಗೌಪ್ಯತೆಯನ್ನು ನಿರ್ಧರಿಸುವ ಅವಕಾಶವನ್ನೂ ನಮಗೇ ನೀಡಲಾಗಿದೆ.
ಜನಸಾಮಾನ್ಯರಿಗೆ ಏನು ಅನುಕೂಲ? ಸಹಮತಿ ಎಂಬ ವ್ಯವಸ್ಥೆ ನಮ್ಮ ಹಣಕಾಸು ಮಾಹಿತಿಯನ್ನು ಒಂದೇ ಕಡೆ ಸಂಗ್ರಹಿಸಲು ಅನುಕೂಲ ಮಾಡುತ್ತದೆ. ಬೇರೆ ಬೇರೆ ವೆಬ್‌ಸೈಟುಗಳಿಂದ ಡೇಟಾ ಸಂಗ್ರಹಿಸಿಕೊಡುವ ಅಗತ್ಯವಿಲ್ಲ. ಈ ಅಗ್ರಿಗೇಟರ್ ವ್ಯವಸ್ಥೆಯಿಂದ ಕೆಲವೇ ನಿಮಿಷಗಳಲ್ಲಿ ಸಾಲ ಪಡೆದುಬಿಡಬಹುದು. ವಿಮೆ ಪಾಲಿಸಿ ಅಥವಾ ಮ್ಯೂಚುವಲ್ ಫಂಡ್ ಖರೀದಿಯಂತೂ ಕೆಲವೇ ನಿಮಿಷಗಳಲ್ಲಿ ನಡೆದು ಹೋಗುತ್ತದೆ. ಯಾಕೆಂದರೆ ಇಲ್ಲಿ ಕಾಗದಪತ್ರಗಳ ವರ್ಗಾವಣೆ ಇರುವುದಿಲ್ಲ. ಬ್ಯಾಂಕ್ ಈ ವ್ಯವಸ್ಥೆಗೆ ನೋಂದಣಿ ಮಾಡಿಕೊಳ್ಳದೇ ಇದ್ದರೆ ಅದರಲ್ಲಿರುವ ನಮ್ಮ ಖಾತೆ ವಿವರಗಳು ಅಗ್ರಿಗೇಟರ್‌ನಲ್ಲಿ ಸಿಗುವುದಿಲ್ಲ. “ಸಹಮತಿ’ ಯೋಜನೆಯಿಂದ ಜನಸಾಮಾನ್ಯರಿಗಷ್ಟೇ ಅಲ್ಲ, ಸಣ್ಣ ಉದ್ದಿಮೆಗಳಿಗೂ ಅನುಕೂಲ. ಸಾಮಾನ್ಯವಾಗಿ ಸಣ್ಣ ಉದ್ದಿಮೆಗಳಿಗೆ ತತ್‌ಕ್ಷಣ ಸಾಲದ ಅಗತ್ಯವಿರುತ್ತದೆ. ಯಾವುದೋ ಟೆಂಡರ್‌ನಲ್ಲಿ ಭಾಗವಹಿಸಲು ಅಥವಾ ಯಾವುದೋ ಸಾಮಗ್ರಿಯನ್ನು ತುರ್ತಾಗಿ ಖರೀದಿಸಲು ಒಂದೆರಡು ದಿನದಲ್ಲಿ ಹಣ ಹೊಂದಿಸುವ ಅಗತ್ಯವಿರುತ್ತದೆ. ಆದರೆ ಸದ್ಯದ ವ್ಯವಸ್ಥೆಯಲ್ಲಿ ಎರಡು ವಾರಕ್ಕೂ ಮೊದಲು ಯಾವ ಹಣಕಾಸು ಸಂಸ್ಥೆಗಳಾಗಲೀ ಅಥವಾ ಬ್ಯಾಂಕ್‌ಗಳಾಗಲಿ ಸಾಲ ನೀಡುವುದಿಲ್ಲ. ಹೀಗಾಗಿ ಜನರು ಲೇವಾದೇವಿದಾರರ ಮೊರೆ ಹೋಗುತ್ತಾರೆ. ಆದರೆ ಸಹಮತಿಯಲ್ಲಿ ಈ ಸಮಸ್ಯೆ ನಿವಾರಣೆಯಾಗುತ್ತದೆ. ಹೇಗೆ ಕೆಲಸ ಮಾಡುತ್ತದೆ?
ಸಹಮತಿ ಎಂಬುದು ಒಂದು ಅಕೌಂಟ್ ಅಗ್ರಿಗೇಟರ್ ರೀತಿ ಕೆಲಸ ಮಾಡುತ್ತದೆ. ಅಂದರೆ ನಾವು ಒಂದು ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳಬೇಕಿದೆ ಅಂದುಕೊಳ್ಳೋಣ. ಆ ಸಾಲಕ್ಕೆ ನಾವು ಎಷ್ಟು ಅರ್ಹ, ನಮಗೆ ಮರುಪಾವತಿಯ ಸಾಮರ್ಥ್ಯ ಇದೆಯಾ ಎಂಬುದನ್ನೆಲ್ಲಾ ಸಾಬೀತು ಮಾಡಲು ನಾವು ಒಂದಷ್ಟು ದಾಖಲೆಯನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ನೀಡಬೇಕಾಗುತ್ತದೆ. ಅದೇ ರೀತಿ ಸಾಲವನ್ನು ಮಂಜೂರು ಮಾಡುವುದಕ್ಕೂ ಮೊದಲು ಬ್ಯಾಂಕ್ ನಮ್ಮ ಹಣಕಾಸು ಮಾಹಿತಿಯನ್ನೂ ಪರಿಶೀಲಿಸುತ್ತದೆ. ಬ್ಯಾಂಕ್ ಖಾತೆ ಡೇಟಾ, ಸಂಬಳ ಮಾಹಿತಿ, ಈ ಹಿಂದೆ ಯಾವುದೇ ಸಾಲವನ್ನು ಪಡೆದಿದ್ದರೆ ಅದನ್ನು ಸರಿಯಾಗಿ ಪಾವತಿ ಮಾಡಲಾಗಿದೆಯೇ ಎಂಬುದನ್ನೆಲ್ಲ ಬ್ಯಾಂಕ್‌ಗಳು ವಿವಿಧ ಮೂಲಗಳಿಂದ ಸಂಗ್ರಹಿಸಿ ಪರಿಶೀಲಿಸುತ್ತವೆ. ಈ ಪ್ರಕ್ರಿಯೆ ಕನಿಷ್ಠ ಒಂದೆರಡು ವಾರಗಳಾದರೂ ತೆಗೆದುಕೊಳ್ಳುತ್ತದೆ. -ಕೃಷ್ಣ ಭಟ್