ಹುಬ್ಬಳ್ಳಿ: ದೇಶದಲ್ಲಿ ಮೂಲ ಸೌಲಭ್ಯ ಹಾಗೂ ವಿದ್ಯುತ್ ವಾಹನ, ರೈಲು ಮಾರ್ಗ ವಿದ್ಯುತ್ತೀಕರಣಕ್ಕೆ ಕೇಂದ್ರ ಸರಕಾರ ಒತ್ತು ನೀಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ದೇಸಾಯಿ ವೃತ್ತದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಹಾಗೂ ಎರಡು ಕಡೆ ರೈಲ್ವೆ ಅಂಡರ್ ಪಾಸ್‌ಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂಲಸೌಕರ್ಯ ನಿಟ್ಟಿನಲ್ಲಿ ಕೇಂದ್ರ ಸರಕಾರ 2024ರ ವೇಳೆಗೆ ಸುಮಾರು 100 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ. ಅದೇ ರೀತಿ ರೈಲ್ವೆ ಇಲಾಖೆಯಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆಗೆ ನಿರ್ಧರಿಸಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ಸಚಿವರು, ಎಲ್ಲ ಇಲಾಖೆಗಳ ಕಾರ್ಯದರ್ಶಿಗಳ ಸಭೆಯನ್ನು ಎಂಟು ದಿನಗಳ ವರೆಗೆ ನಡೆಸಿ ಮೂಲಸೌಕರ್ಯ ಹಾಗೂ ರೈಲ್ವೆ ಹೂಡಿಕೆ ಬಗ್ಗೆ ಸುದೀರ್ಘ ಪರಾಮರ್ಶೆ ಮಾಡಿದಾರೆ. ಸೌರಶಕ್ತಿ ವಿದ್ಯುತ್ ಬಗ್ಗೆ ಪ್ರಧಾನಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಿದರು.
2024-25ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಲಿದೆ ಎಂಬ ಹೇಳಿಕೆಗೆ ಅನೇಕರು ಟೀಕಿಸಿದ್ದಾರೆ. ಈಗಾಗಲೇ ಭಾರತ 3 ಟ್ರಿಲಿಯನ್ ಡಾಲರ್ ಆರ್ಥಿಕ ಸಾಮರ್ಥ್ಯದೊಂದಿಗೆ ವಿಶ್ವದಲ್ಲೇ 6ನೇ ಬಲಾಡ್ಯ ರಾಷ್ಟ್ರವಾಗಿದೆ. 2024-25 ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದು ಖಚಿತ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಬೇಲೇಕೇರಿ ಬಂದರು ಅಭಿವೃದ್ಧಿ ಕುರಿತ ತಮ್ಮ ಮನವಿಗೆ ಸಿಎಂ ಯಡಿಯೂರಪ್ಪ ಅವರು ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಅದೇ ರೀತಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕುರಿತು ರಾಜ್ಯ ವನ್ಯಜೀವಿ ಮಂಡಳಿ ಸಭೆ ಕರೆದು ಒಪ್ಪಿಗೆ ಸೂಚಿಸುವ ನಿಟ್ಟಿನಲ್ಲಿಯೂ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾಗಿ ಹೇಳಿದರು.
ಫೆ. 14ರಂದು ಹುಬ್ಬಳ್ಳಿಯಲ್ಲಿ ನಡೆಯುವ ಹೂಡಿಕೆದಾರರ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ತಾವು ದಾವೂಸ್ ವಿಶ್ವ ಆರ್ಥಿಕ ಶೃಂಗಸಭೆಗೆ ಹೋಗಿದ್ದಾಗ 40ಕ್ಕೂ ಹೆಚ್ಚು ಪ್ರಖ್ಯಾತ ಉದ್ಯಮಿಗಳು ಹೂಡಿಕಾ ಸಮಾವೇಶಕ್ಕೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಲು ಆಸಕ್ತಿ ತೋರಿದ್ದಾರೆ. ಎಸ್.ಎಂ. ಕೃಷ್ಣ ನಂತರದಲ್ಲಿ ಸಭೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿಗೆ ವಿಶ್ವ ಆರ್ಥಿಕ ವೇದಿಕೆಯಲ್ಲಿ ರಾಜ್ಯದ ಎರಡನೇ ಸ್ತರದ ನಗರಗಳಲ್ಲಿ ಹೂಡಿಕೆ ಬಗ್ಗೆ ಪ್ರಸ್ತಾಪ ಮಾಡಲಾಯಿತು ಎಂದು ತಿಳಿಸಿದರು.