ಹೊಸದಿಲ್ಲಿ: ಇದೇ ಡಿಸೆಂಬರ್ ತಿಂಗಳ ಒಳಗೆ ಕಂಪೆನಿಗಳ ನೋಂದಾವಣೆಗೆ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹೊಸ ವ್ಯವಸ್ಥೆಯ ಅನುಷ್ಠಾನದಿಂದ ಪ್ರಸ್ತುತ ಸಲ್ಲಿಸ ಬೇಕಾಗಿರುವ 50ಕ್ಕೂ ಹೆಚ್ಚು ನಮೂನೆ ಗಳಿಗೆ ಬದಲಾಗಿ ಕೆಲವೇ ವೆಬ್ ಆಧರಿತ ಪಿಡಿಎಫ್ ಪ್ರತಿಗಳನ್ನು ಸಲ್ಲಿಸಿದರೆ ಸಾಕು ಎನ್ನಲಾಗಿದೆ.
ಕಂಪೆನಿಗಳು, ಉದ್ಯಮಗಳ ಕಾನೂನು ಬದ್ಧ ನೋಂದಾವಣೆಯನ್ನು ಈ ವ್ಯವಸ್ಥೆ ಅತ್ಯಂತ ಸರಳಗೊಳಿಸಲಿದೆ. ಕಂಪೆನಿಯ ನೋಂದಾಯಿತ ಕಚೇರಿ, ನಿರ್ದೇಶಕರ ವಿವರ, ಉದ್ಯಮ ಪರವಾನಿಗೆ ಪತ್ರ ಮತ್ತಿತರ ಎಲ್ಲ ಪ್ರಕ್ರಿಯೆಗಳನ್ನು ಕೂಡ ಈ ಮಾದರಿಯಲ್ಲಿಯೇ ನಡೆಸುವುದಕ್ಕೆ ಹೊಸ ವ್ಯವಸ್ಥೆ ಅನುವು ಮಾಡಿಕೊಡಲಿದೆ.
ಹೊಸ ವ್ಯವಸ್ಥೆಗೆ ಪರಿವರ್ತನೆಯಾಗುವ ವೇಳೆ ಸುಮಾರು 15 ದಿನಗಳ ಕಾಲ ಈಗಿರುವ ನೋಂದಾವಣೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬುದಾಗಿ ಬಲ್ಲ ಮೂಲಗಳು ತಿಳಿಸಿವೆ.