ಜಾಲ್ನಾ: ರಾಜ್ಯದಲ್ಲಿ ಲಸಿಕೆ ಅಭಿಯಾನ ಚುರುಕುಗೊಳಿಸಬೇಕಾದರೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಅಗತ್ಯ ಲಸಿಕೆಗಳನ್ನು ಒದಗಿಸಬೇಕು ಎಂದು ಸಾರ್ವಜನಿಕ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
ಭೋಕರ್ದನ್, ರಾಜೂರ್, ಮಂಟಾ, ಘನ್ಸವಾಂಗಿ, ಅಂಬಾಡಾ ಸಹಿತ ಜಿಲ್ಲೆಯ ಇತರ ಸ್ಥಳಗಳ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಭೇಟಿ ನೀಡಿದ ಆರೋಗ್ಯ ಸಚಿವ ರಾಜೇಶ್ ಟೋಪೆ ವ್ಯವಸ್ಥೆಯನ್ನು ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬರಬೇಕಾದರೆ 45 ವರ್ಷ ಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಇನ್ನೂ ಚುರುಕು ಗೊಳಿಸಬೇಕಾಗಿದೆ. ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದ ನಾಗರಿಕರು ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಇದನ್ನು ಗಮನಿಸಿ ರಾಜ್ಯ ಸರಕಾರ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ದೊರೆಯುವ ಲಸಿಕೆಗಳನ್ನು ಆದಷ್ಟು ಬೇಗ ಪಡೆಯುವ ಪ್ರಯತ್ನ ನಡೆಸುತ್ತಿದೆ.
ಲಸಿಕೆಗಳ ಪೂರೈಕೆ ವಿಳಂಬವಾದರೆ 18ರಿಂದ 44 ವರ್ಷದೊಳಗಿನವರಿಗೆ ಲಸಿಕೆ ಅಭಿಯಾನ ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಗುವುದು. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗುತ್ತದೆ. ಉತ್ಪಾದಕರಲ್ಲಿಲಸಿಕೆ ದಾಸ್ತಾನು ಲಭ್ಯವಿದ್ದರೆ ಅದನ್ನು ಖರೀದಿಸಲು ರಾಜ್ಯ ಸರಕಾರ ಸಿದ್ಧವಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಅಳವಡಿಸಿದ ನಿರ್ಬಂಧ ಗಳು ಮೇ 15ರ ಬಳಿಕವೂ ಮುಂದುವರೆಯುತ್ತವೇ ಎಂದು ಈಗಲೇ ಹೇಳುವುದು ಸೂಕ್ತವಲ್ಲ. ತಜ್ಞರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಆರೋಗ್ಯ ಇಲಾಖೆ ಕೋವಿಡ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಮೇ 15ರ ಬಳಿಕ ಪರಿಸ್ಥಿತಿಯನ್ನು ಪರಿಗಣಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿಯ ಶೇ. 80ರಷ್ಟು ಹಾಸಿಗೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ತಾಲೂಕು ಮಟ್ಟದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಯ ಪ್ರಮಾಣ ಹೆಚ್ಚಾಗಿದೆ ಎಂದು ಕೆಲವು ಸಭೆಗಳು ಹೇಳಿವೆ.
ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗಾಗಿ ಸರಕಾರದ ಆದೇಶಕ್ಕಿಂತ ಹೆಚ್ಚಿನ ಶುಲ್ಕವಿಧಿಸದಂತೆ ನೋಡಿಕೊಳ್ಳಲು ತನಿಖಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳ ಕೊರತೆ ಇದ್ದರೆ ಶಿಕ್ಷಕರಿಗೆ ಒಂದು ದಿನದ ತರಬೇತಿ ನೀಡಿ ಅವರನ್ನು ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್‌ಗಳನ್ನು ಲೆಕ್ಕಪರಿಶೋಧಿಸಲು ನೇಮಿಸಬಹುದು ಎಂದು ಟೋಪೆ ಹೇಳಿದ್ದಾರೆ.