Advertisement
ಕೇಂದ್ರ ಸರಕಾರ ನೀಡುತ್ತಿರುವ ಪಡಿತರ ಅಕ್ಕಿಯ ಜತೆಗೆ ರಾಜ್ಯ ಸರಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಹೆಚ್ಚುವರಿಯಾಗಿ ಬಿಪಿಎಲ್ ಕಾರ್ಡ್‌ನ ಪ್ರತೀ ಸದಸ್ಯರಿಗೆ 5 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಕೇಂದ್ರ ಸರಕಾರ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಅಕ್ಕಿಯ ಕೊರತೆಯಿಂದ ಅದಕ್ಕೆ ಸಮನಾದ ಮೌಲ್ಯದ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ. ತಾಂತ್ರಿಕ ಕಾರಣದಿಂದ ಅರ್ಹ ಫಲಾನುಭವಿಗಳಲ್ಲಿ ಅನೇಕರಿಗೆ ಹಣವೂ ತಲುಪಿಲ್ಲ.
ಹೆಚ್ಚುವರಿಯಾಗಿ ವಿತರಿಸಿರುವ ಬಿಪಿಎಲ್ ಕಾರ್ಡ್‌ದಾರಿಗೆ ಅಕ್ಟೋಬರ್ ಮತ್ತು ನವೆಂಬರ್‌ಗೆ ಅಗತ್ಯವಿರುವ 40 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಕೆ.ಜಿ.ಗೆ 34.60 ರೂ. ದರದಲ್ಲಿ ಎನ್‌ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರದ ಮೂಲಕ ಖರೀದಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಹಂಚಿಕೆಯಾಗಿರುವ ಹೆಚ್ಚುವರಿ ಬಿಪಿಎಲ್ ಕಾರ್ಡ್‌ದಾರರಿಗೂ ಈ ಅಕ್ಕಿ ಸಿಗಲಿದೆ.
Related Articles
ಅಕ್ಕಿ ಖರೀದಿ/ ಎತ್ತುವಳಿಗೆ ಅಧಿಕೃತ ಆದೇಶ ಈವರೆಗೆ ಬಂದಿಲ್ಲ. ಪ್ರತೀ ತಿಂಗಳು 10ನೇ ತಾರೀಕಿನೊಳಗೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಗೆ ಬೇಕಾದಷ್ಟು ಅಕ್ಕಿ ಪೂರೈಕೆಯಾಗಿಲ್ಲ. ಹೀಗಾಗಿ ಪಡಿತರ ಕಾರ್ಡ್ ದಾರರಿಗೆ ಯಾವುದೇ ಸೂಚನೆ ನೀಡಿಲ್ಲ. ಅಲ್ಲದೆ ಎರಡನೇ ತಿಂಗಳ ಹಣ ವರ್ಗಾವಣೆಯೂ ಆಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Advertisement