Advertisement

ಲಸಿಕೆ ಪ್ರಯೋಗ ಇನ್ನಷ್ಟು ಚುರುಕು ; ವಿತರಣೆಗೆ ಕಾರ್ಯಪಡೆ ರಚಿಸಿದ ಕೇಂದ್ರ

02:29 AM Aug 09, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಲಸಿಕೆ ಪ್ರಯೋಗ ಮತ್ತಷ್ಟು ಚುರುಕುಗೊಳ್ಳುತ್ತಿರುವಾಗಲೇ ಅವುಗಳ ಮೇಲೆ ನಿಗಾ ವಹಿಸಲು ಮತ್ತು ಸಾರ್ವಜನಿಕರಿಗೆ ವಿತರಣೆಯ ಉದ್ದೇಶಕ್ಕಾಗಿ ಕೇಂದ್ರ ಸರಕಾರವು ಕಾರ್ಯಪಡೆ ರಚಿಸಿದೆ.

Advertisement

ಭಾರತದಲ್ಲಿ ಈಗ ಸುಮಾರು 6-7 ಲಸಿಕೆಗಳು ಹಂತ 2, ಹಂತ 3ರ ಪ್ರಯೋಗಕ್ಕೆ ಅಣಿಯಾಗಿವೆ.

ಈ ಹಿನ್ನೆಲೆಯಲ್ಲಿ ಸೂಕ್ತ ಲಸಿಕೆಗಳನ್ನು ಗುರುತಿಸುವುದು, ಅವುಗಳ ಖರೀದಿ, ವಿತರಣೆ ಮತ್ತು ಈ ಎಲ್ಲ ಪ್ರಕ್ರಿಯೆಗಳ ಮೇಲಿನ ನಿಯಂತ್ರಣಕ್ಕಾಗಿ ಈ ಸಮಿತಿಯನ್ನು ರಚಿಸಲಾಗಿದೆ.

ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಆಕ್ಸ್‌ಫ‌ರ್ಡ್‌ ವಿ.ವಿ. ಲಸಿಕೆ ಪ್ರಯೋಗವಾಗುತ್ತಿದ್ದರೆ ರೇಖ ಆಸ್ಪತ್ರೆಯಲ್ಲಿ ಕೊವ್ಯಾಕ್ಸಿನ್‌ ಪ್ರಯೋಗ ನಡೆಯುತ್ತಿದೆ.

ಭಾರತದಲ್ಲಿ ಅನುಷ್ಠಾನಗೊಳ್ಳಲಿರುವ ಲಸಿಕೆ ಪ್ರಯೋಗಗಳ ಮೇಲೆ ನಿಗಾ ವಹಿಸಲು ಕೇಂದ್ರ ಸರಕಾರ ಕೆಲವು ಸಚಿವಾಲಯಗಳ, ಸಂಶೋಧನೆ- ಆಡಳಿತ ಸಂಸ್ಥೆಗಳ ಮತ್ತು ವಿವಿಧ ರಾಜ್ಯಗಳ ಪ್ರತಿನಿಧಿಗಳುಳ್ಳ ಉನ್ನತ ಮಟ್ಟದ ಟಾಸ್ಕ್ ಫೋರ್ಸ್‌ ರಚಿಸಿದೆ.

Advertisement

ಯಾರ್ಯಾರಿದ್ದಾರೆ?
ಕೇಂದ್ರ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ರಚಿಸಲಾಗಿರುವ ಟಾಸ್ಕ್ ಫೋರ್ಸ್‌ನಲ್ಲಿ ಭಾರತೀಯ ವೈದ್ಯ ವಿಜ್ಞಾನಗಳ ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ| ರಣದೀಪ್‌ ಗುಲೇರಿಯಾ, ವಿದೇಶಾಂಗ ಇಲಾಖೆ ಬಯೋ ಟೆಕ್ನಾಲಜಿ, ಮಾಹಿತಿ ತಂತ್ರಜ್ಞಾನ ಇಲಾಖೆಗಳ ಪ್ರತಿನಿಧಿಗಳು, ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು, ಏಡ್ಸ್‌ ಸಂಶೋಧನ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಎಂಸಿಆರ್‌) ಮತ್ತು ಎಲ್ಲ ರಾಜ್ಯಗಳ ಪ್ರತಿನಿಧಿಗಳು ಇದ್ದಾರೆ. ಈ ಸಮಿತಿಯು ನೀತಿ ಆಯೋಗದ ಡಾ| ವಿ.ಕೆ. ಪಾಲ್‌ ಮತ್ತು ಕೇಂದ್ರ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲಿದೆ.

ಭಾರತದಲ್ಲಿ ಸದ್ಯ ಝೈಡಸ್‌ ಕ್ಯಾಡಿಲಾ ಮತ್ತು ಭಾರತ್‌ ಬಯೋಟೆಕ್‌ ಸಂಸ್ಥೆಗಳ ಲಸಿಕೆಗಳು ಕ್ಲಿನಿಕಲ್‌ ಟ್ರಯಲ್‌ ಹಂತದಲ್ಲಿವೆ. ಆದರೆ ಆಕ್ಸ್‌ಫ‌ರ್ಡ್‌ ವಿ.ವಿ.ಯ ಆ್ಯಸ್ಟ್ರಾ ಝೆನೆಕಾ ಲಸಿಕೆಯನ್ನು ಮನುಷ್ಯರ ಪ್ರಯೋಗಕ್ಕೆ ಅನುವು ಮಾಡಿಕೊಡಲಾಗಿದೆ.

ಪ್ರಯೋಗಕ್ಕೆ ಸಿದ್ಧವಾದ ಲಸಿಕೆಗಳು: 177

ಮೊದಲ ಹಂತದ ಪ್ರಯೋಗ ಪೂರ್ಣ: 14

ಎರಡನೇ ಹಂತದಲ್ಲಿ ಪಾಸ್‌: 03

ಮೂರನೇ ಹಂತದಲ್ಲಿ ಪಾಸ್‌: 06

ಕಿರಾಣಿ, ತರಕಾರಿ ವ್ಯಾಪಾರಿಗಳಿಗೆ ಪರೀಕ್ಷೆ ಕಡ್ಡಾಯಕ್ಕೆ ಸೂಚನೆ
ಇದೇ ವೇಳೆ ಕಿರಾಣಿ ಅಂಗಡಿ ಕೆಲಸಗಾರರು, ತರಕಾರಿ ಮತ್ತು ಇತರ ಅಗತ್ಯ ವಸ್ತುಗಳ ಮಾರಾಟಗಾರರಿಂದ ಹೆಚ್ಚಿನ ಸಂಖ್ಯೆಯ ಜನರಿಗೆ ಕೋವಿಡ್ 19 ಸೋಂಕು ಹರಡುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ. ಇಂಥ ವರ್ಗಗಳ ಜನರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸುವಂತೆ ಸಚಿವಾಲಯ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಅಲ್ಲದೆ ಆ್ಯಂಬುಲೆನ್ಸ್‌ನಲ್ಲಿ ಆಮ್ಲಜನಕ ವ್ಯವಸ್ಥೆ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳ ಅಗತ್ಯವನ್ನೂ ಒತ್ತಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next