ಮಲೇರಿಯಾ ಔಷಧ ಸೇರಿದಂತೆ 14 ಔಷಧಗಳ ಮೇಲೆ ಭಾರತ, ರಫ್ತು ನಿರ್ಬಂಧವನ್ನು ತೆರವುಗೊಳಿಸಿದೆ. ಕೋವಿಡ್ ನಿಂದ ಸಂಕಷ್ಟದಲ್ಲಿರುವ ದೇಶಗಳ ಕೈಹಿಡಿಯಲು, ಆದ್ಯತೆಯ ಮೇರೆಗೆ ಮಲೇರಿಯಾ ಔಷಧ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸಲು ನಿರ್ಧರಿಸಿದೆ.
ಕೋವಿಡ್ ಗೆ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳೇ ಮದ್ದು ಎಂದು ಸಂಶೋಧನೆಯಿಂದ ಗೊತ್ತಾದ ತಕ್ಷಣ, ಭಾರತ ಮಾರ್ಚ್ ಮೂರನೇ ವಾರದಲ್ಲಿಯೇ ಅದರ ಅಂತಾರಾಷ್ಟ್ರೀಯ ರಫ್ತಿಗೆ ನಿರ್ಬಂಧ ಹೇರಿತ್ತು.
ಇನ್ನೊಂದೆಡೆ ಸೋಂಕು ತೀವ್ರಗೊಂಡಾಗ, ಸ್ವತಃ ಅಮೆರಿಕವೇ ಈ ಔಷಧ ಕಳುಹಿಸಿಕೊಡುವಂತೆ ಭಾರತಕ್ಕೆ ದುಂಬಾಲು ಬಿದ್ದಿತ್ತು. ಕೇಂದ್ರ ಸರಕಾರ ರಫ್ತು ನಿರ್ಬಂಧ ತೆರವುಗೊಳಿಸದೇ ಇದ್ದಿದ್ದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ಟ್ರಂಪ್ ಬೆದರಿಕೆ ಒಡ್ಡಿದ್ದರು.
30 ರಾಷ್ಟ್ರಗಳಿಗೆ ರಫ್ತು: ಆದರೆ, ಭಾರತ ಕೇವಲ ಅಮೆರಿಕವನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳದೆ, ಇಡೀ ವಿಶ್ವ ಸಮುದಾಯಕ್ಕೆ ಸಿಹಿಸುದ್ದಿ ನೀಡಿದೆ. ಆರಂಭದಲ್ಲಿ ಭಾರತವು ಕೋವಿಡ್ ನಿಂದ ತತ್ತರಿಸಿರುವ 30 ರಾಷ್ಟ್ರಗಳಿಗೆ ಮಲೇರಿಯಾ ಔಷಧವನ್ನು ರಫ್ತು ಮಾಡಲು ಮುಂದಾಗಿದೆ.
ಭಾರತವೇ ಬಾಸ್: ಭಾರತವು ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಗಳ ಬಹುದೊಡ್ಡ ಉತ್ಪಾದಕ ರಾಷ್ಟ್ರ. ದೇಶೀಯ ಬೇಡಿಕೆಗಳಲ್ಲದೆ, ಜಾಗತಿಕ ಬೇಡಿಕೆಗಳಿಗೂ ಸ್ಪಂದಿಸುವಷ್ಟು ಸಾಮರ್ಥ್ಯ ಭಾರತಕ್ಕಿದೆ.
‘ಮಾನವೀಯತೆಯ ಆಧಾರದ ಮೇಲೆ, ಅಗತ್ಯ ರಾಷ್ಟ್ರಗಳಿಗೆ ಮಾತ್ರವೇ ಈ ರಫ್ತುನೀತಿ ಅನ್ವಯಗೊಳ್ಳಲಿದೆ. ಬೇಡಿಕೆಯ ಪರಿಶೀಲನೆಯನ್ನೂ ಸರಕಾರವೇ ಮಾಡುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.
ಔಷಧ ಪೂರೈಸುವಂತೆ ಟ್ರಂಪ್ ಅಲ್ಲದೆ, ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋ ಅವರಿಂದಲೂ ಮೋದಿ ಅವರಿಗೆ ಕರೆಬಂದಿತ್ತು.
ರಫ್ತಾಗುತ್ತಿರುವ ಔಷಧ
ಹೈಡ್ರೋಕ್ಸಿಕ್ಲೋರೋಕ್ವಿನ್, ಪ್ಯಾರಾಸೆಟಮಾಲ್, ನಿಯೋಮೈಸಿನ್, ಎರಿಥ್ರೋಮೈಸಿನ್, ಟಿನಿಡಾಝೋಲ್, ಮೆಟ್ರೋನಿಡಝೋಲ್, ಅಸಿಕ್ಲೋವಿರ್, ವಿಟಮಿನ್ ಬಿಎಸ್, ಪ್ರೊಜೆಸ್ಟ್ರೋನ್- ಮುಂತಾದ ಪ್ರಮುಖ ಔಷಧಗಳು.