ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರೋಗ್ಯ, ಶಿಕ್ಷಣ, ಕೃಷಿ ಸಹಿತ ಅನೇಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಪ್ರಥಮ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಯೋಗವನ್ನು ಆರ್ಯುವೇದದೊಂದಿಗೆ ಸೇರಿಸಿ ರೋಗ ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.
ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿ ನಂತರ ಸಾರ್ವಜನಿಕ ಸಭೆಯನ್ನುಉದ್ದೇಶಿಸಿ ಮಾತನಾಡಿದರು.
ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ವಿಶೇಷವಾಗಿ ಬಡವರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಬೇಕೆಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಆಧುನಿಕ ವ್ಯವಸ್ಥೆ ಮತ್ತು ಮೂಲ ಸೌಲಭ್ಯ ಒದಗಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಸಂಕಲ್ಪದೊಂದಿಗೆ ಅಭಿಯಾನದ ರೀತಿ ಕೆಲಸ ಮಾಡುತ್ತಿದೆ ಎಂದರು.
ಕಳೆದ ಏಳು ವರ್ಷದ ಹಿಂದೆ ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. ಪ್ರಸ್ತುತ 596 ವೈದ್ಯಕೀಯ ಕಾಲೇಜುಗಳಿವೆ, 51 ಸಾವಿರ ವೈದ್ಯರು ಎಂಬಿಬಿಎಸ್ ಪದವಿ ಪಡೆಯುತ್ತಿದ್ದರು, ಇದೀಗ 89,875 ವಿದ್ಯಾ ರ್ಥಿಗಳು ಎಂಬಿಬಿಎಸ್ ಪದವಿಯನ್ನು ಪಡೆದು ಹೊರಬರುತ್ತಿದ್ದಾರೆ ಎಂದರು.
ಶ್ರೀ ಸತ್ಯ ಸಾಯಿ ಆಶ್ರಮದ ಸದ್ಗುರು ಮಧುಸೂಧನ್ ಸಾಯಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಗಣಿ ಸಚಿವ ಪ್ರಹ್ಲಾದ್ ಜೋಷಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಕೊರೊನಾ ನಿಯಂತ್ರಣ ಕರ್ನಾಟಕ ಬೆಸ್ಟ್ ಕರ್ನಾಟಕ ಸರ್ಕಾರವೂ ಕೊರೊನಾ ಸೋಂಕಿನ ಮೊದಲ, ದ್ವಿತೀಯ ಮತ್ತು ತೃತೀಯ ಸೋಂಕಿನ ಅಲೆಯನ್ನು ಸಮರ್ಥವಾಗಿ ಎದುರಿಸಿ ಅದನ್ನು ನಿಯಂತ್ರಿಸಿದೆ. ಅದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸರ್ಕಾರವನ್ನು ಅಭಿನಂದಿಸುವುದಾಗಿ ಕೇಂದ್ರ ಸಚಿವ ಅಮಿತ್ ಶಾ ಹೇಳಿದರು.