ನವದೆಹಲಿ: ದೇಶದ ಗಡಿಗಳನ್ನು ಇನ್ನಷ್ಟು ಸುಭದ್ರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಭಾಗದಲ್ಲಿನ ರಸ್ತೆಗಳನ್ನು ಸುಧಾರಿಸುವ ಮಹತ್ವದ ಹೆಜ್ಜೆಯಿಟ್ಟಿದೆ. ಯುದ್ಧ ಅಥವಾ ಯಾವುದೇ ರೀತಿಯ ಸಂಘರ್ಷದ ಸನ್ನಿವೇಶದಲ್ಲಿ ಉಪಯೋಗಕ್ಕೆ ಬರಲಿ ಎಂಬ ಕಾರಣಕ್ಕಾಗಿ ಭಾರತ ಚೀನಾ ಗಡಿಯಲ್ಲಿ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ವಿಶೇಷವೆಂದರೆ ಈಗಾಗಲೇ ಚೀನಾ ತನ್ನ ಭಾಗದಲ್ಲಿ ಇಂಥದ್ದೇ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಭಾರತವೂ ಗಡಿ ಸುರಕ್ಷತೆಗೆ ಕೈ ಹಾಕಿದೆ.
ಚೀನಾ ಜತೆಗೆ ಭಾರತ ಒಟ್ಟು 4000 ಕಿ.ಮೀ. ಗಡಿಯನ್ನು ಹಂಚಿಕೊಂಡಿದ್ದು, ಇಲ್ಲಿ ಒಟ್ಟು 44 ರಸ್ತೆಗಳನ್ನು ನಿರ್ಮಾಣ ಮಾಡಲು ಅದು ತೀರ್ಮಾನಿಸಿದೆ. ಈ ಸಂಬಂಧ ಕೇಂದ್ರ ಲೋಕೋಪಯೋಗಿ ಇಲಾಖೆ ಈಗಾಗಲೇ ರೂಪುರೇಷೆ ಸಿದ್ಧಪಡಿಸಿದ್ದು, ಸಂಪುಟದ ಅನುಮತಿಗಾಗಿ ಕಾದಿದೆ. ಈ ರಸ್ತೆಗಳನ್ನು ಬಳಸಿ ಸೇನೆಯು ತ್ವರಿತವಾಗಿ ಗಡಿಗೆ ಹೆಚ್ಚುವರಿ ಪಡೆಯನ್ನು ನಿಯೋಜಿಸಬಹುದಾಗಿದೆ.
ಈ ಯೋಜನೆಯನ್ನು 21 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಈ ರಸ್ತೆ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ, ಚೀನಾ ಇತ್ತೀಚೆಗೆ ಈ ಗಡಿ ಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಿತ್ತು. ಅಷ್ಟೇ ಅಲ್ಲ, ಮೂಲಸೌಕರ್ಯ ಅಭಿವೃದ್ಧಿಗೂ ಚೀನಾ ಹೆಚ್ಚಿನ ಪ್ರಾತಿನಿಧ್ಯ ನೀಡಿದೆ. ಎರಡು ವರ್ಷಗಳ ಹಿಂದೆ ಡೋಕ್ಲಾಂ ವಿವಾದ ಉಂಟಾಗಿದ್ದು ಕೂಡ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಕಳೆದ ಕೆಲವು ವರ್ಷಗಳಲ್ಲಿ ಭಾರತದೊಂದಿಗೆ ಚೀನಾ ಹಂಚಿಕೊಂಡ ಗಡಿ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ರಸ್ತೆ ನಿರ್ಮಾಣ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿ ಕ್ರಮಗಳನ್ನು ಚೀನಾ ಕೈಗೊಂಡಿದೆ. ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸುವಾಗ ಭಾರತ ಆಕ್ಷೇಪವನ್ನೂ ಸಲ್ಲಿಸಿತ್ತು.
ಪಾಕ್ ಗಡಿಯಲ್ಲಿ 2100 ಕಿ.ಮೀ ರಸ್ತೆ:
ಚೀನಾ ಗಡಿಯಲ್ಲಿ ರಸ್ತೆ ನಿರ್ಮಾಣದ ಜೊತೆಗೆ ಪಂಜಾಬ್ ಹಾಗೂ ರಾಜಸ್ಥಾನದಲ್ಲೂ ಪಾಕಿಸ್ತಾನದ ಗಡಿಯಾದ್ಯಂತ ರಸ್ತೆ ನಿರ್ಮಿಸಲಾಗುತ್ತದೆ. ಇದಕ್ಕಾಗಿ 2,100 ಕೋಟಿ ರೂ. ಮೀಸಲಿಡಲಾಗಿದೆ. ರಾಜಸ್ಥಾನದಲ್ಲಿ 3700 ಕೋಟಿ ರೂ. ವೆಚ್ಚದಲ್ಲಿ 1400 ಕಿ.ಮೀ. ಹಾಗೂ ಪಂಜಾಬ್‌ನಲ್ಲಿ 700 ಕಿ.ಮೀ ಉದ್ದದ ರಸ್ತೆಗಳನ್ನು 1750 ಕೋಟಿ ರೂ. ವೆಚ್ಚದಲ್ಲಿ ಆದ್ಯತೆಯ ಮೇಲೆ ನಿರ್ಮಾಣ ಮಾಡಲಾಗುತ್ತದೆ. ಪಾಕಿಸ್ತಾನದೊಂದಿಗೆ ಭಾರತವು 3300 ಕ್ಕೂ ಹೆಚ್ಚು ಕಿ.ಮೀ ಗಡಿಯನ್ನು ಹೊಂದಿದೆ. ಜಮ್ಮು ಕಾಶ್ಮೀರ (1225 ಕಿ.ಮೀ), ರಾಜಸ್ಥಾನ (1037 ಕಿ.ಮೀ), ಪಂಜಾಬ್ (553 ಕಿ.ಮೀ) ಮತ್ತು ಗುಜರಾತ್ (508 ಕಿ.ಮೀ) ಗಡಿಯನ್ನು ಪಾಕ್‌ನೊಂದಿಗೆ ಭಾರತ ಹಂಚಿಕೊಂಡಿದೆ.