Advertisement

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ವ್ಯಾಪ್ತಿಯಲ್ಲಿ 3 ತಿಂಗಳು 5 ಕೆಜಿ ಆಹಾರ ಧಾನ್ಯ

05:40 PM Apr 15, 2020 | Hari Prasad |

ನವದೆಹಲಿ: ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ವ್ಯಾಪ್ತಿಯಲ್ಲಿ ದೇಶದ 80 ಕೋಟಿ ಮಂದಿಗೆ ಪ್ರತಿ ತಿಂಗಳು 5 ಕೆಜಿ ಆಹಾರ ಧಾನ್ಯ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ಅದನ್ನು ನೀಡಲಾಗುತ್ತದೆ. ಕೇಂದ್ರ ಗೃಹ ಖಾತೆಯಲ್ಲಿನ ಜಂಟಿ ಕಾರ್ಯದರ್ಶಿ ಪುಣ್ಯಾ ಸಲಿಲ ಶ್ರೀವಾಸ್ತವ ಮಂಗಳವಾರ ದೈನಂದಿನ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.

Advertisement

ಇದರ ಜತೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏ.13ರ ವರೆಗೆ 22 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ಆಹಾರ ಧಾನ್ಯಗಳನ್ನು ನೀಡಿರುವುದಾಗಿ ಹೇಳಿದ್ದಾರೆ.

ಇಂದು ಶುರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ಅಗತ್ಯ ಗೃಹೋಪಯೋಗಿ ವಸ್ತುಗಳು ಸೇರಿ ವಿವಿಧ ಸರಕು, ಸಾಮಗ್ರಿಗಳ ಆಂತರಿಕ (ಅಂತಾರಾಜ್ಯ) ಸಾಗಣೆಯನ್ನು ನಿರ್ವಹಿಸುವ ಉದ್ದೇಶದೊಂದಿಗೆ ದೇಶವ್ಯಾಪಿ 24 x 7 ಕಾಲ್‌ ಸೆಂಟರ್‌ಗೆ ಕೇಂದ್ರ ಸರಕಾರ ಬುಧವಾರ ಚಾಲನೆ ನೀಡಲಿದೆ. ಅಂತಾರಾಜ್ಯ ಸರಕು ಸಾಗಣೆ ವೇಳೆ ಏನೇ ತೊಂದರೆ ಎದುರಾದರೂ 18001804200 ಮತ್ತು 18001814488ಗೆ ಕರೆ ಮಾಡಲು ಅವಕಾಶ ಇರುತ್ತದೆ.

ಅಗತ್ಯ ವಸ್ತುಗಳ ದಾಸ್ತಾನಿದೆ; ಆತಂಕ ಬೇಡ
ದೇಶದಲ್ಲಿ ಆಹಾರ, ಔಷಧಗಳು ಹಾಗೂ ಇತರೆ ಅತ್ಯವಶ್ಯಕ ವಸ್ತುಗಳ ದಾಸ್ತಾನು ಸಾಕಷ್ಟಿದ್ದು, ಯಾರೂ ಲಾಕ್‌ ಡೌನ್‌ ವಿಸ್ತರಣೆಯಾಯಿತೆಂದು ಭಯಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್‌ ವಿಸ್ತರಣೆ ಘೋಷಿಸಿದ ಬೆನ್ನಲ್ಲೇ ಸರಣಿ ಟ್ವೀಟ್‌ ಗಳನ್ನು ಮಾಡಿರುವ ಶಾ, ದೇಶದ ಗೃಹ ಸಚಿವನಾಗಿ ನಾನು ನಿಮಗೆ ನೀಡುವ ಭರವಸೆಯೇನೆಂದರೆ, ಯಾವುದಕ್ಕೂ ಕೊರತೆ ಉಂಟಾಗುವುದಿಲ್ಲ. ಅಗತ್ಯ ವಸ್ತುಗಳ ದಾಸ್ತಾನು ಇದೆ. ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ. ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ರಾಜ್ಯ ಸರಕಾರಗಳ ಪಾತ್ರವನ್ನು ಶ್ಲಾಘಿಸಿದ್ದಾರೆ.

ಕೈಗಾರಿಕೋದ್ಯಮದ ಬೆಂಬಲ
ಮಾನವೀಯ ಬಿಕ್ಕಟ್ಟನ್ನು ತಪ್ಪಿಸಲು ಲಾಕ್‌ಡೌನ್‌ ವಿಸ್ತರಣೆ ಅನಿವಾರ್ಯ ಎಂದು ಪ್ರತಿಪಾದಿಸಿರುವ ಭಾರತೀಯ ಕೈಗಾರಿಕೋದ್ಯಮ, ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಕೈಗಾರಿಕೋದ್ಯಮಕ್ಕೆ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು ಎಂದು ಆಗ್ರಹಿಸಿದೆ.

Advertisement

ಲಾಕ್‌ ಡೌನ್‌ನಿಂದಾಗಿ ದೇಶ ಪ್ರತಿದಿನ 40 ಸಾವಿರ ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುತ್ತಿದೆ. 21 ದಿನಗಳ ಲಾಕ್‌ ಡೌನ್‌ ಅವಧಿಯಲ್ಲಿ ದೇಶಕ್ಕೆ ಸುಮಾರು 7-8 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. 2020ರ ಏಪ್ರಿಲ್‌-ಸೆಪ್ಟಂಬರ್‌ ಅವಧಿಯಲ್ಲಿ 4 ಕೋಟಿ ಉದ್ಯೋಗ ನಷ್ಟದ ಅಂದಾಜಿದೆ. ಹೀಗಾಗಿ, ಸರಕಾರ ಕೈಗಾರಿಕೋದ್ಯಮ ವಲಯಕ್ಕೆ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು ಎಂದು ಎಫ್ಐಸಿಸಿಐ ಅಧ್ಯಕ್ಷ ಸಂಗೀತಾ ರೆಡ್ಡಿ ತಿಳಿಸಿದ್ದಾರೆ.

ಸಿಕ್ಕಿಂನಲ್ಲಿ ರಿಲ್ಯಾಕ್ಸ್‌
ಲಾಕ್‌ ಡೌನ್‌ಗೆ ರಿಲ್ಯಾಕ್ಸ್‌ ನೀಡಿ, ಏಪ್ರಿಲ್‌ 21ರಿಂದ ಕೃಷಿ ಚಟುವಟಿಕೆಗಳಿಗೆ, ನಿರ್ಮಾಣ ಕಾರ್ಯಗಳಿಗೆ ಅವಕಾಶ ಕಲ್ಪಿಸಿಕೊಡಲು ಸಿಕ್ಕಿಂ ಸರಕಾರ ತೀರ್ಮಾನಿಸಿದೆ. ಸಚಿವ ಪ್ರೇಮ್‌ಸಿಂಗ್‌ ತಮಾಂಗ್‌ ಮಾತನಾಡಿ, ರೈತರು ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಗುತ್ತಿಗೆದಾರರು ಕೂಡ ತಮ್ಮ ಕ್ಷೇತ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಥಳೀಯವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರ್ಮಾಣ ಚಟುವಟಕೆಗಳನ್ನು ಪುನರಾರಂಭಿಸಬಹುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next