Advertisement

ಹಾಸನಕ್ಕೆ ಐಐಟಿ: ಮತ್ತೆ ಚಿಗುರೊಡೆದ ಕನಸು

03:18 PM Dec 02, 2021 | Team Udayavani |

ಹಾಸನ: ಐಐಟಿ ಸ್ಥಾಪನೆಯಾಗಬೇಕೆಂಬ ಹಾಸನ ಜಿಲ್ಲೆಯ ಜನರ ಕನಸು ಮತ್ತೆ ಚಿಗುರೊಡೆದಿದೆ. ಎರಡೂವರೆ ದಶಕಗಳ ಹಿಂದೆ ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ಹಾಸನಕ್ಕೆ ಐಐಟಿ ಮಂಜೂರಾತಿಯ ಪ್ರಯತ್ನ ನಡೆದಿತ್ತು. ರಾಜಕೀಯ ಕಾರಣಗಳಿಂದಾಗಿ ಹಾಸನಕ್ಕೆ ಮರೀಚಿಕೆಯಾಗಿದ್ದ ಐಐಟಿ ಕನಸು ನನಸಾಗುವ ಆಶಯ ಮೂಡಿದೆ.

Advertisement

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಭೇಟಿಯಾಗಿ ಹಾಸನಕ್ಕೆ ಐಐಟಿ ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ. ನನ್ನ ಕನಸಿನ ಯೋಜನೆಯನ್ನು ಮಂಜೂರು ಮಾಡಬೇಕು ಎಂಬ ಗೌಡರ ಬೇಡಿಕೆಗೆ ಪ್ರಧಾನಿ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬದು ಹಾಸನದವರ ಪಾಲಿಗೆ ಸದ್ಯಕ್ಕೆ ಸಿಹಿ ಸುದ್ದಿ.

ಕನಸು ಕನಸಾಗಿಯೇ ಉಳಿದಿತ್ತು: 1996ರಲ್ಲಿ ಎಚ್‌ .ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಹಾಸನದಲ್ಲಿ ಐಐಟಿ ಸ್ಥಾಪನೆಯ ಪ್ರಯತ್ನ ನಡೆದಿತ್ತು. ಹಾಸನ – ಬೆಂಗಳೂರು ನೂತನ ರೈಲು ಮಾರ್ಗ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಿ ಯಶಸ್ವಿಯಾಗಿದ್ದ ದೇವೇಗೌಡರ ಪುತ್ರ, ಅಂದಿನ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು ಐಐಟಿ ಸ್ಥಾಪನೆಗೂ ಪ್ರಸ್ತಾವನೆ ಸಿದ್ಧಪಡಿಸಿದ್ದರು.

ಇದನ್ನೂ ಓದಿ:- ನೂತನ ಕಾಂಗ್ರೆಸ್ ಕಚೇರಿ ಉದ್ಘಾಟನೆ

ಅಂದು ದೇವೇಗೌಡರ ಸಚಿವ ಸಂಪುಟದಲ್ಲಿ ಎಸ್‌.ಆರ್‌.ಬೊಮ್ಮಾಯಿ ಅವರು ಮಾನವ ಸಂಪನ್ಮೂಲ ಸಚಿವರಾಗಿದ್ದರಿಂದ ಕರ್ನಾಟಕಕ್ಕೆ ಅದರಲ್ಕೂ ಹಾಸನಕ್ಕೆ ಐಐಟಿ ಮಂಜೂರಾತಿ ಆಗಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಗೌಡರು ಪ್ರಧಾನಿ ಹುದ್ದೆಯಿಂದ ಇಳಿದರು. ಹಾಗಾಗಿ ಹಾಸನದ ಐಐಟಿ ಕನಸು ಕನಸಾಗಿಯೇ ಉಳಿದಿತ್ತು.

Advertisement

 ಐಐಟಿಗಾಗಿ 1,050 ಎಕರೆ ಸ್ವಾಧೀನ: ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ದೇವೇಗೌಡರು ನಡೆಸಿದ್ದ ಪ್ರಯತ್ನ ಸಫ‌ಲವಾಗಿರಲಿಲ್ಲ. ಆನಂತರ ಯುಪಿಎ ಸರ್ಕಾರದ ಅವಧಿಯಲ್ಲಿಯೂ ಐಐಟಿ ಮಂಜೂ ರಾತಿಯ ಪ್ರಯತ್ನವನ್ನು ದೇವೇಗೌಡರು ಮತ್ತು ರೇವಣ್ಣ ಅವರು ಮುಂದುವರಿಸಿದ್ದರು.

2004ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಹಾಸನದಲ್ಲಿ ಐಐಟಿ ಸ್ಥಾಪನೆಯ ಪ್ರಯತ್ನ ಮರುಜೀವ ಪಡೆಯಿತು. ಅಂದು ಕೇಂದ್ರ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಅರ್ಜುನ್‌ಸಿಂಗ್‌ ಅವರು ಹಾಸನಕ್ಕೆ ಐಐಟಿ ಮಂಜೂರಾತಿಯ ಖಚಿತ ಭರವಸೆ ನೀಡಿದ್ದರಿಂದ ಹಾಸನದಲ್ಲಿ ಐಐಟಿಗಾಗಿ 1,050 ಎಕರೆಯನ್ನೂ ಸ್ವಾಧೀನಪಡಿಸಿಕೊಳ್ಳಲಾಯಿತು.

ಆದರೆ, ಅರ್ಜುನ್‌ಸಿಂಗ್‌ ಅವರಿಂದ ಮಾನವ ಸಂಪನ್ಮೂಲ ಖಾತೆ ಬದಲಾಯಿತು. ಹಾಸನದ ಐಐಟಿ ಕನಸೂ ಕನಸಾಗಿಯೇ ಉಳಿಯಿತು. ಹಾಸನ ಹೆಸರು ನಮೂದಿಸದೆ ತಪ್ಪಿತ್ತು ಐಐಟಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರವೂ ಐಐಟಿ ಮಂಜೂರಾತಿಯ ಪ್ರಯತ್ನ ಮುಂದುವರಿಯಿತು. ಆ ಪ್ರಯತ್ನದ ಫ‌ಲವಾಗಿ ಕರ್ನಾಟಕಕ್ಕೆ ಐಐಟಿ ಮಂಜೂರಾತಿಯೂ ಆಯಿತು.

ಆದರೆ, ಉತ್ತರ ಕರ್ನಾಟಕದಲ್ಲಿಯೇ ಐಐಟಿ ಸ್ಥಾಪನೆಯಾಗಬೇಕೆಂಬ ಹೋರಾಟ ಹಾಗೂ ಅಂದು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ರಾಜಕೀಯ ಕಾರಣಕ್ಕೆ ಹಾಸನವನ್ನು ಕಡೆಗಣಿಸಿದ್ದರಿಂದ ಐಐಟಿ ಧಾರವಾಡದ ಪಾಲಾಯಿತು. ಅಂದು ರಾಜ್ಯ ಸರ್ಕಾರ ಐಐಟಿ ಸ್ಥಾಪನೆಯ ಸ್ಥಳ ಆಯ್ಕೆಯಲ್ಲಿ ಧಾರವಾಡ ಮತ್ತು ಮೈಸೂರು ಹೆಸರಿನೊಂದಿಗೆ ಹಾಸನದ ಹೆಸರನ್ನೂ ಸೇರಿದ್ದರೆ, ಅಂದು ಹಾಸನಕ್ಕೆ ಐಐಟಿ ಮಂಜೂರಾಗುವ ಸಾಧ್ಯತೆ ಇತ್ತು.

ಆದರೆ, ಅಂದು ರಾಜ್ಯ ಸರ್ಕಾರ ಧಾರವಾಡ ಮತ್ತು ಮೈಸೂರನ್ನು ಮಾತ್ರ ನಮೂದಿಸಿದ್ದರಿಂದ ಐಐಟಿ ಹಾಸನಕ್ಕೆ ತಪ್ಪಿತ್ತು. ಆದರೆ, ಐಐಟಿಗಾಗಿ ಹಾಸನದಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ಇಂದಿಗೂ ಐಐಟಿಗಾಗಿಯೇ ಮೀಸಲಾಗಿ ಉಳಿದಿದೆ. ಹಾಸನಕ್ಕೆ ಮಂಜೂರು ಮಾಡಲು ಮನವಿ: ಈಗ ದೇವೇಗೌಡರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಹಾಸನಕ್ಕೆ ಐಐಟಿಗಾಗಿ ನಡೆಸಿದ ಹೋರಾಟವನ್ನು ವಿವರಿಸುವುದರ ಜೊತೆಗೆ ದೇಶದ ಕೆಲವು ರಾಜ್ಯಗಳಲ್ಲಿ ಎರಡು ಐಐಟಿ ಗಳಿವೆ.

ಅದನ್ನಾಧರಿಸಿ ಕರ್ನಾಟಕಕ್ಕೆ ಮತ್ತೂಂದು ಐಐಟಿಯನ್ನು ಹಾಸನಕ್ಕೆ ಮಂಜೂರು ಮಾಡಿ ಎಂದು ಮನವಿ ಮಾಡಿದ್ದಾರೆ. ಭೂ ಸ್ವಾಧೀನದ ಸಮಸ್ಯೆ ಇಲ್ಲದಿರುವುದರಿಂದ ಹಾಗೂ ದಕ್ಷಿಣ ಕರ್ನಾಟಕಕ್ಕೂ ಒಂದು ಐಐಟಿ ಅವಶ್ಯಕತೆಯನ್ನು ಕೇಂದ್ರ ಸರ್ಕಾರ ಮನಗಂಡು ಹಾಸನಕ್ಕೆ ಐಐಟಿ ಮಂಜೂರು ಮಾಡಬಹುದೆಂಬ ಹಾಸನ ಜಿಲ್ಲೆಯ ಜನರ ಕನಸು ಮತ್ತೆ ಚಿಗುರೊಡೆದಿದೆ. ಈಗಲಾದರೂ ಕನಸು ನನಸಾಗಲಿ ಎಂಬ ಅಶಯ ಜಿಲ್ಲೆಯ ಜನರದ್ದು.

Advertisement

Udayavani is now on Telegram. Click here to join our channel and stay updated with the latest news.

Next