ಮಂಗಳೂರು: ಕೇಂದ್ರ ಸರಕಾರವು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯಬೇಕು ಎಂದು ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ ಹೇಳಿದರು.
ಶ್ರೀರಾಮ್ ಟ್ರಾನ್ಸ್‌ಪೊರ್ಟ್ ಫೈನಾನ್ಸ್ ಕಂಪೆನಿ ಲಿ.ನ ಪ್ರಾಯೋಜಕತ್ವದಲ್ಲಿ ಶನಿವಾರ ನಗರದ ಪುರಭವನದಲ್ಲಿ ನಡೆದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ. ಮಕ್ಕಳಲ್ಲಿ ಪುಸ್ತಕದ ಹೊರೆಯನ್ನು ತಪ್ಪಿಸುವ ಸಲುವಾಗಿ ಸಿಬಿಎಸ್‌ಇ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪಠ್ಯ ಪುಸ್ತಕದ ಹೊರೆಯನ್ನು ಕೇಂದ್ರ ಸರಕಾರ ಶೇ. 50ರಷ್ಟು ಇಳಿಸಿದೆ ಎಂದು ತಿಳಿಸಿದರು.
ಬಿಜೆಪಿ ಮಂಗಳೂರು ದಕ್ಷಿಣ ಅಧ್ಯಕ್ಷ ವೇದವ್ಯಾಸ ಕಾಮತ್ ಮಾತನಾಡಿ, ಯಾವುದೇ ಕಂಪೆನಿಯು ಕೇವಲ ಉದ್ಯಮದ ದೃಷ್ಟಿಯಿಂದ ನೋಡದೆ ಸಮಾಜಕ್ಕೆ ಉಪಕಾರ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಹೃದಯ ಶ್ರೀಮಂತಿಕೆ ಅಗತ್ಯ: ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾ| ಬೃಜೇಶ್ ಚೌಟ ಮಾತನಾಡಿ, ಶಿಕ್ಷಣದಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ಕನಸನ್ನು ಸ್ವಾಮಿ ವಿವೇಕಾನಂದರು ಕಂಡಿದ್ದರು. ಶ್ರೀಮಂತಿಕೆ ಕೆಲವು ದಿನಗಳ ಕಾಲ ಮಾತ್ರ ಇರುತ್ತದೆ. ಆದರೆ ಪರೋಪಕಾರ ಮಾಡುವಂತಹ ಹೃದಯ ಶ್ರೀಮಂತಿಕೆ ಕೊನೆಯ ವರೆಗೂ ಉಳಿಯುತ್ತದೆ ಎಂದು ಹೇಳಿದರು. ಮನಪಾ ಸದಸ್ಯೆ ರೂಪ ಡಿ. ಬಂಗೇರ ಮಾತನಾಡಿ, ಸ್ವಾಭಿಮಾನಿಯಾಗಿ, ಸ್ವತಂತ್ರವಾಗಿ ಬದುಕಲು ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ ಎಂದರು.
12,81,500 ರೂ. ವಿದ್ಯಾರ್ಥಿವೇತನ ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ, 8ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾಭ್ಯಾಸ ಸಂದರ್ಭ ಶೇ.60ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ಪ್ರತಿಭಾನ್ವಿತ ಮಕ್ಕಳಿಗೆ ತಲಾ 3 ಸಾವಿರ ರೂ. ವಿದ್ಯಾರ್ಥಿವೇತನ ಮತ್ತು ಪಿಯುಸಿ ಹಂತದ ಮಕ್ಕಳಿಗೆ ತಲಾ 3,500 ರೂ. ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಈ ವರ್ಷ ಮಂಗಳೂರಿನ 416 ಮಂದಿಗೆ ಸುಮಾರು 12,81,500 ರೂ. ವಿದ್ಯಾರ್ಥಿವೇತನ ನೀಡಲಾಯಿತು.
ಶ್ರೀರಾಮ್ ಟ್ರಾನ್ಸ್‌ಪೊರ್ಟ್ ಫೈನಾನ್ಸ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಜಿ. ರೇವಣ್‌ಕರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಎಸ್‌ಟಿಎಫ್‌ಸಿ ಸಿಇಒ ಸುದರ್ಶನ ಬಿ. ಹೊಳ್ಳ, ಬಿಜೆಪಿ ಮಂಗಳೂರು ಉತ್ತರ ಅಧ್ಯಕ್ಷ ಡಾ| ವೈ. ಭರತ್ ಕುಮಾರ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪನಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ದಿವಾಕರ್ ಬಿಜೆಪಿ ಮಂಗಳೂರು ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಶ್ ಪ್ರಭು, ಸಂಸ್ಥೆಯ ರೀಜನಲ್ ಬಿಸಿನೆಸ್ ಹೆಡ್ ಶರತ್‌ಚಂದ್ರ ಭಟ್ ಕಾಕುಂಜೆ ಉಪಸ್ಥಿತರಿದ್ದರು.