ಹೊಸದಿಲ್ಲಿ: ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಮಳೆ ಅನಾಹುತ, ಬೆಳೆ ಕಡಿಮೆ ಕಾರಣಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಏರುತ್ತಿದ್ದು ಇದನ್ನು ತಡೆಯಲು ಕೇಂದ್ರ ಸರಕಾರ ಇದೀಗ ಮುಂದಾಗಿದೆ.
ಮೊದಲ ಕ್ರಮವಾಗಿ ಕೇಂದ್ರ ಸರಕಾರ ಈರುಳ್ಳಿ ರಫ್ತಿಗೆ ನಿಷೇಧ ಹೇರಿದೆ. ಅಲ್ಲದೇ ಮಾರಾಟಗಾರರು ಕಡಿಮೆ ದಾಸ್ತಾನು ಇಡುವಂತೆ ಹೇಳಿದ್ದು, ಹೆಚ್ಚುವರಿ ದಾಸ್ತಾನು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಸೂಚಿಸಲಾಗಿದೆ. ಸಗಟು ಮಾರಾಟಗಾರರಿಗೆ 100 ಕ್ವಿಂಟಾಲ್ ಮತ್ತು ಹೋಲ್‌ಸೇಲ್ ಮಾರಾಟಗಾರರಿಗೆ 500 ಕ್ವಿಂಟಾಲ್ ದಾಸ್ತಾನು ಇಡಲಷ್ಟೇ ಅನುಮತಿ ನೀಡಲಾಗಿದೆ.
ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ. ಆದ್ದರಿಂದ ಕೂಡಲೇ ರಫ್ತು ನಿಷೇಧಿಸಲಾಗಿದ ಎಎಂದು ಸಾಮಾನ್ಯ ವಿದೇಶಿ ಮಾರಾಟ ನಿರ್ದೇಶನಾಲಯ ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಅತಿ ಹೆಚ್ಚು ದರದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕೆ ಭಾರತದಿಂದ ಈರುಳ್ಳಿ ಮಾರಾಟವಾಗುತ್ತಿದೆ. ಇದನ್ನು ತಡೆಯಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿನ ಕ್ರಮದ ಎಚ್ಚರಿಕೆಯನ್ನೂ ಸರಕಾರ ನೀಡಿದೆ.
ಹರಿಯಾಣಾ, ಆಂಧ್ರಪ್ರದೇಶ, ದಿಲ್ಲಿ, ತ್ರಿಪುರಾ, ಒಡಿಶಾದಲ್ಲಿ ಕೇಂದ್ರ ಗೋದಾಮಿನಿಂದ ಈರುಳ್ಳಿ ಪೂರೈಸಲು ಬೇಡಿಕೆ ಇಡಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತಿದೆ. ಮಳೆಯಿಂದಾಗಿ ಇಲ್ಲಿನ ಬೆಳೆಗಳಿಗೆ ಹಾನಿಯಾಗಿದೆ.